10 ಅಂಕಿಗಳ ಮೊಬೈಲ್ ಸಂಖ್ಯೆಗಳು ಬರಿದಾಗುತ್ತಿರುವುದರಿಂದ ಸಮಸ್ಯೆಗಳು ಎದುರಾಗುತ್ತಿರುವುದನ್ನು ಮನಗಂಡಿರುವ ದೂರವಾಣಿ ಕ್ಷೇತ್ರದ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ (ಸಿ-ಡಾಟ್), ಸರಕಾರ ನೀಡಲುದ್ದೇಶಿಸಿರುವ ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ)ಯನ್ನು ಮೊಬೈಲ್ ನಂಬರ್ ಆಗಿ ಬದಲಾಯಿಸಲು ಸಾಧ್ಯವೇ ಎಂಬುದರ ಕುರಿತು ಅಧ್ಯಯನ ನಡೆಸುತ್ತಿದೆ.
ವಿಶಿಷ್ಟ ಗುರುತಿನ ಸಂಖ್ಯೆಯನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೆ ನೀಡಲು ಸರಕಾರ ಈಗಾಗಲೇ ಅದಕ್ಕೊಂದು ಪ್ರಾಧಿಕಾರವನ್ನು ರಚಿಸಿದ್ದು, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿಯವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ. ಈ ಪ್ರಾಧಿಕಾರವು ನೀಡುವ ಗುರುತಿನ ಸಂಖ್ಯೆಯು ಚಾಲನಾ ಪರವಾನಗಿ ಸಂಖ್ಯೆಯಂತೆಯೇ ಇರಲಿದ್ದು, ಇದನ್ನೇ ಮೊಬೈಲ್ ನಂಬರ್ ಆಗಿ ಪರಿವರ್ತಿಸುವ ಯೋಚನೆ ಸಿ-ಡಾಟ್‌ನದ್ದು.
PR
ಪ್ರಸಕ್ತ ಪ್ರತೀ ತಿಂಗಳೂ ಒಂದು ಕೋಟಿ ಚಂದಾದಾರರು ಮೊಬೈಲ್ ಸೇವೆಗೆ ಒಳಪಡುತ್ತಿದ್ದಾರೆ. ಈಗ ನೀಡುತ್ತಿರುವ 10 ಅಂಕಿಗಳ ಮೊಬೈಲ್ ಸಂಖ್ಯೆಗಳೂ ಬರಿದಾಗುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಅಂಕಿಯನ್ನು ಮೊಬೈಲ್ ಸಂಖ್ಯೆಯಲ್ಲಿ ಬಳಸುವುದು ಅನಿವಾರ್ಯ. ಅದಕ್ಕಾಗಿ ವಿಶಿಷ್ಟ ಗುರುತಿನ ಚೀಟಿಯ ಸಂಖ್ಯೆಯನ್ನೇ ಮೊಬೈಲ್‌ಗೂ ನೀಡಲು ಸಾಧ್ಯವೇ ಎಂಬುದರ ಕುರಿತು ಸಿ-ಡಾಟ್ ಅಧ್ಯಯನ ನಡೆಸುತ್ತಿದೆ.
ಇತರ ಗುರುತು ಸಂಖ್ಯೆಗಳನ್ನು ಕೂಡ ಮೊಬೈಲ್ ಸಂಖ್ಯೆಯನ್ನಾಗಿ ಬಳಸಬಹುದೇ ಎಂಬುದರ ಕುರಿತು ನಾವೀಗ ಅಧ್ಯಯನ ನಡೆಸುತ್ತಿದ್ದೇವೆ. ಪ್ರಸಕ್ತ ನಾವು ಹೊಂದಿರುವ 10 ಅಂಕಿಗಳ ಸಂಖ್ಯೆಗಳು ಶೀಘ್ರವೇ ಮುಗಿಯಲಿದೆ. ಹಾಗಾಗಿ ಒಂದೇ ಸಂಖ್ಯೆಯನ್ನು ಹಲವು ಕಡೆ ಬಳಸುವ ಮೂಲಕ ಬಹುಪಯೋಗಿಯನ್ನಾಗಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಸಿ-ಡಾಟ್ ಕಾರ್ಯನಿರ್ವಾಹಕ ನಿರ್ದೇಶಕ ಪಿ.ವಿ. ಆಚಾರ್ಯ ತಿಳಿಸಿದ್ದಾರೆ.
ಮೊಬೈಲ್ ಸಂಖ್ಯೆಗಳು ಬರಿದಾಗುತ್ತಿರುವ ಹಿನ್ನಲೆಯಲ್ಲಿ ದೂರವಾಣಿ ಇಲಾಖೆಯು (ಡಾಟ್) 11ರಿಂದ 12 ಅಂಕಿಗಳ ಮೊಬೈಲ್ ಸಂಖ್ಯೆಗಳನ್ನು ಜಾರಿಗೆ ತರುವ ಬಗ್ಗೆ ಯೋಜನೆ ರೂಪಿಸುತ್ತಿದೆ. ಆದರೆ ಅದು ಕೂಡ ಬೇಡಿಕೆಯನ್ನು ದೀರ್ಘಕಾಲದವರೆಗೆ ಪೂರೈಸುವ ಸಾಮರ್ಥ್ಯ ಹೊಂದಿರುತ್ತದೆ ಎಂಬ ಬಗ್ಗೆ ಖಚಿತತೆಯಿಲ್ಲ ಎಂದು ಅವರು ನುಡಿದರು.
ಸಾಮಾಜಿಕ ಸುರಕ್ಷತಾ ಸಂಖ್ಯೆಯನ್ನು ಅಮೆರಿಕಾ ಪ್ರಜೆ ಹೊಂದಿರುವಂತೆ ನಾವು ಕೂಡ ವೈಯಕ್ತಿಕ ಸಂಖ್ಯೆಯನ್ನು ಹೊಂದಿರಬೇಕೆಂದು ಯುಐಡಿಗೆ ಮೊರೆ ಹೋಗುತ್ತಿದ್ದೇವೆ. ಅದೇ ಯುಐಡಿ ಸಂಖ್ಯೆಯನ್ನು ನಾವು ಮೊಬೈಲ್ ಸಂಪರ್ಕಕ್ಕೂ ಬಳಸಬಹುದಲ್ಲವೇ ಎಂಬುದು ನಮ್ಮ ಯೋಚನೆ ಎಂದು ಅವರು ತಿಳಿಸಿದರು.
ಆದರೆ ಪ್ರಸಕ್ತ ಸಂದರ್ಭದಲ್ಲಿ ಅದು ಸಾಧ್ಯವಿಲ್ಲ. ಅದಕ್ಕಾಗಿ ಹಲವು ನೀತಿ-ನಿಯಮಾವಳಿಗಳನ್ನು ಅನುಸರಿಸಬೇಕಾಗಿದೆ. ಅದು ಸಾಧ್ಯವೇ ಎಂಬುದರ ಬಗ್ಗೆ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಅದಕ್ಕಾಗಿ ನಾವು ಕೈಗೊಳ್ಳಬೇಕಾದ ಕ್ರಮಗಳೇನು ಎಂಬ ಕುರಿತು ಅಧ್ಯಯನ ನಡೆಯುತ್ತಿದೆ. ನಾವು ಕೇವಲ ಪ್ರಾಥಮಿಕ ಹಂತದಲ್ಲಷ್ಟೇ ಇದ್ದೇವೆ ಎಂದಿದ್ದಾರೆ ಆಚಾರ್ಯ.
ನಾವೀಗ ಹೊಂದಿರುವ 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು ಭಾರತ ರೂಪಿಸಿದ್ದು 2003ರಲ್ಲಿ. ಆಗಿನ ಪ್ರಕಾರ ಇದು 2030ರವರೆಗೆ ಸಾಕಾಗಬಹುದು ಎಂಬ ನೆಲೆಯಲ್ಲಿ 75 ಕೋಟಿ ಬಳಕೆದಾರರ ಮಿತಿಯೊಂದಿಗೆ ರಚನೆ ಮಾಡಲಾಗಿತ್ತು. ಆದರೆ ದೇಶದಲ್ಲಿ ಅತಿ ವೇಗದಿಂದ ಮೊಬೈಲ್ ಕ್ರಾಂತಿ ನಡೆಯುತ್ತಿರುವುದರಿಂದ 75 ಕೋಟಿ ಚಂದಾದಾರರಾಗಲು 2030ರವರೆಗೆ ಕಾಯಬೇಕಾಗಿಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಇದು ಮುಗಿದು ಹೋಗಲಿದೆ. ಯಾಕೆಂದರೆ ಭಾರತ ಈಗಾಗಲೇ 44.16 ಕೋಟಿ ಚಂದಾದಾರರನ್ನು ಹೊಂದಿದೆ.