ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇತರ ಬ್ಯಾಂಕುಗಳ ಎಟಿಎಂ ಉಚಿತ ಬಳಕೆಗೆ ಆರ್‌ಬಿಐ ತಡೆ (RBI | IBA | Bank | ATM)
 
ಇತರ ಬ್ಯಾಂಕುಗಳ ಎಟಿಎಂ ಯಂತ್ರಗಳಿಂದಲೂ ಗ್ರಾಹಕರು ತಮ್ಮ ಖಾತೆಯಿಂದ ಹಣ ಡ್ರಾ ಮಾಡುವ ಸೌಲಭ್ಯವನ್ನು ಸೀಮಿತಗೊಳಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ತಿಂಗಳಲ್ಲಿ ಐದು ಬಾರಿ ಮಾತ್ರ ಈ ಅವಕಾಶವನ್ನು ನೀಡಿದೆ. ಅಲ್ಲದೆ ಒಂದು ಬಾರಿಯ ವ್ಯವಹಾರದಲ್ಲಿ 10 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಡ್ರಾ ಮಾಡದಂತೆ ನಿರ್ಬಂಧ ವಿಧಿಸಿದೆ.

ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಜಾರಿಗೆ ಬಂದಿದ್ದ ಮುಕ್ತ ಎಟಿಎಂ ವ್ಯವಸ್ಥೆಯನ್ನು ಆರ್‌ಬಿಐ ಐದೇ ತಿಂಗಳಲ್ಲಿ ಬದಲಾಯಿಸುವ ಯೋಚನೆ ಮಾಡಿದೆ.

ಈ ಸಂಬಂಧ ಭಾರತೀಯ ಬ್ಯಾಂಕುಗಳ ಅಸೋಸಿಯೇಷನ್ (ಐಬಿಎ)ಗೆ ಆರ್‌ಬಿಐ ಸಂದೇಶ ರವಾನಿಸಿದ್ದು, ಶೀಘ್ರದಲ್ಲೇ ಜಾರಿಯಾಗುವ ನಿರೀಕ್ಷೆಗಳಿವೆ ಎಂದು ಐಬಿಎ ಅಧ್ಯಕ್ಷ ಕೆ. ರಾಮಕೃಷ್ಣನ್ ತಿಳಿಸಿದ್ದಾರೆ.

ಥರ್ಡ್ ಪಾರ್ಟಿ ಎಟಿಎಂಗಳಿಂದ ಹಣ ತೆಗೆಯುವ ಸೌಲಭ್ಯವನ್ನು ಒಂದು ಬಾರಿಗೆ 10,000 ರೂಪಾಯಿಗಳು ಮಾತ್ರ ಎಂದು ಸೀಮಿತಗೊಳಿಸಲಾಗಿದೆ. ಅಲ್ಲದೆ ಒಂದು ತಿಂಗಳಲ್ಲಿ ಥರ್ಡ್ ಪಾರ್ಟಿ ಎಟಿಎಂಗಳಲ್ಲಿ ಕೇವಲ ಐದು ಬಾರಿ ಮಾತ್ರ ಹಣ ಡ್ರಾ ಮಾಡಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ.

ಇತರ ಬ್ಯಾಂಕುಗಳ ಎಟಿಎಂ ಯಂತ್ರಗಳಿಂದ ಐದು ಬಾರಿಯ ವ್ಯವಹಾರ ಮಾತ್ರ ಉಚಿತವಾಗಿರುವಂತೆ ಮತ್ತು ಐದಕ್ಕಿಂತ ಹೆಚ್ಚು ಸಲ ಇತರ ಬ್ಯಾಂಕುಗಳಿಂದ ಹಣ ಡ್ರಾ ಮಾಡಿದರೆ ಶುಲ್ಕ ವಿಧಿಸುವ ಅವಕಾಶ ನೀಡಬೇಕೆಂದು ರಿಸರ್ವ್ ಬ್ಯಾಂಕ್‌ಗೆ ಭಾರತದ ಖಾಸಗಿ ಹಾಗೂ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳನ್ನು ಪ್ರತಿನಿಧಿಸುವ ಐಬಿಎ ಮನವಿ ಮಾಡಿಕೊಂಡಿತ್ತು.

ಈ ಪ್ರಸ್ತಾಪಕ್ಕೆ ಇದೀಗ ಆರ್‌ಬಿಐ ಒಪ್ಪಿಗೆ ಸೂಚಿಸಿದ್ದು, ಐದಕ್ಕಿಂತ ಹೆಚ್ಚು ಬಾರಿ ಥರ್ಡ್ ಪಾರ್ಟಿ ಎಟಿಎಂ ಬಳಸಿದಲ್ಲಿ ಸಂಬಂಧಪಟ್ಟ ಎಟಿಎಂ ಯಂತ್ರದ ಬ್ಯಾಂಕು ಗ್ರಾಹಕರಿಗೆ 18ರಿಂದ 20 ರೂಪಾಯಿಗಳವರೆಗೆ ಶುಲ್ಕ ವಿಧಿಸಬಹುದಾಗಿದೆ. ಆದರೆ ಇದು ತಕ್ಷಣದಿಂದ ಜಾರಿಯಾಗುತ್ತಿಲ್ಲ. ಶೀಘ್ರ ಜಾರಿಯಾಗುವ ಸಾಧ್ಯತೆಗಳಿವೆ ಎಂದು ಬ್ಯಾಂಕ್‌ಗಳ ಸಂಘಟನೆ ತಿಳಿಸಿದೆ.

ಭಾರತದಾದ್ಯಂತ ಸುಮಾರು 40,000 ಎಟಿಎಂ ಯಂತ್ರಗಳಿವೆ. ಅವುಗಳಲ್ಲಿ ಸುಮಾರು 30,000 ಎಟಿಎಂಗಳು ನಗರ ಹಾಗೂ ಮೆಟ್ರೋಗಳಲ್ಲಿವೆ. ಉಳಿದ 10,000 ಎಟಿಎಂಗಳು ಉಪ-ನಗರ ಕೇಂದ್ರಗಳು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿವೆ.

ಸಾರ್ವಜನಿಕ, ಖಾಸಗಿ, ಸಹಕಾರಿ ಮತ್ತು ವಿದೇಶಿ ಕ್ಷೇತ್ರಗಳ 80 ಬ್ಯಾಂಕುಗಳು ಪ್ರಸಕ್ತ ದೇಶದಲ್ಲಿ ಎಟಿಎಂ ಜಾಲದಲ್ಲಿ ಕಾರ್ಯನಿರ್ವಹಿಸುತ್ತಿವೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ