ಬೃಹತ್ ನಕಲಿ ಕರೆನ್ಸಿ ಜಾಲವನ್ನು ಬೇಧಿಸಿರುವ ಪೊಲೀಸರು 1,20,000 ರೂಪಾಯಿ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದು, ಮಹಿಳೆ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಪಾಟಿಯಾಲದ ದೇವಿಘರ್ ಬಳಿ ಟೆಂಪೋವೊಂದರಲ್ಲಿ ಪ್ರಯಾಣಿಸುತ್ತಿದ್ದ ಆರೋಪಿಗಳು ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ಅವರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
100 ಮತ್ತು 500 ರೂಪಾಯಿ ಮುಖಬೆಲೆಯ ನಾಲ್ಕು ಪ್ಯಾಕೆಟ್‌ಗಳಲ್ಲಿ ನಕಲಿ ನೋಟುಗಳನ್ನು ತುಂಬಲಾಗಿತ್ತು. ಆರೋಪಿಗಳನ್ನು ಪರ್ಮೀಂದರ್ ಸಿಂಗ್ ಮತ್ತು ಸುಖ್ವೀಂದರ್ ಕೌರ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಲುಧಿಯಾನಾ ನಿವಾಸಿಗಳು.
ಇದು ಅಲ್ಪ ಮಾತ್ರ.. ದೇಶದಲ್ಲಿ ನಡೆಯುತ್ತಿರುವ ಭಾರೀ ನಕಲಿ ನೋಟಿನ ಜಾಲಕ್ಕೆ ಹೋಲಿಸಿದರೆ ಇದು ತೀರಾ ಕಿಂಚಿತ್ತು. ಪಾಕಿಸ್ತಾನವು ನಮ್ಮಲ್ಲಿನ ಅರ್ಥ ವ್ಯವಸ್ಥೆ ಬುಡಮೇಲಾಗಬೇಕೆಂಬ ಉದ್ದೇಶದಿಂದ ನಕಲಿ ನೋಟುಗಳನ್ನು ರವಾನಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಯಾವುದೇ ಉಗ್ರ ಪಾಕಿಸ್ತಾನ ಗಡಿಯಿಂದ ಭಾರತಕ್ಕೆ ಬರುವುದಾದಲ್ಲಿ ಕನಿಷ್ಠ ಆತನಿಗೆ ಐದು ಲಕ್ಷ ರೂಪಾಯಿ ನಕಲಿ ಹಣವನ್ನು ನೀಡಲಾಗುತ್ತದೆ. ಅದನ್ನವರು ಭಾರತದಲ್ಲಿ ತಮ್ಮ ಅಗತ್ಯಗಳಿಗಾಗಿ ಬಳಸಿಕೊಳ್ಳುವ ಮೂಲಕ ಚಲಾವಣೆಗೆ ತರುತ್ತಾರೆ.
ರಾಷ್ಟ್ರೀಯ ಅಪರಾಧ ದಾಖಲೆ ಘಟಕದ ವರದಿಗಳ ಪ್ರಕಾರ ಈ ವರ್ಷ ಪೊಲೀಸರು 14 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. 2007ಕ್ಕೆ ಹೋಲಿಸಿದರೆ ಇದು 8 ಕೋಟಿ ರೂಪಾಯಿಗಳಷ್ಟು ಹೆಚ್ಚು.