ಅಮೆರಿಕಾ ಅರ್ಥವ್ಯವಸ್ಥೆಯು ಪ್ರಗತಿಯ ಸನಿಹದಲ್ಲಿದೆ ಎಂದು ಫೆಡರಲ್ ರಿಸರ್ವ್ ಅಧ್ಯಕ್ಷ ಬೆನ್ ಬರ್ನಾಂಕೆ ಹೇಳಿಕೆ ನೀಡಿದ ನಂತರ ಇತರ ಆರ್ಥಿಕ ವರದಿಗಳೂ ಚೇತರಿಕೆಯ ವರದಿ ನೀಡಿದ ಕಾರಣ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದ್ದು, ವರ್ಷದ ಅಧಿಕ ಗರಿಷ್ಠ ದರ ದಾಖಲಿಸಿದೆ.
ಬರ್ನಾಂಕೆಯವರು ವೂಮಿಂಗ್‌ನಲ್ಲಿನ ಜಾಕ್ಸನ್ ಹೋಲ್‌ನಲ್ಲಿ ನಡೆದ ಫೆಡ್ ಕಾನ್ಫರೆನ್ಸ್‌ನಲ್ಲಿ ಹೇಳಿಕೆ ನೀಡಿದ ನಂತರ ಅಕ್ಟೋಬರ್ ವಿತರಣೆಗಾಗಿನ ಬೆಂಚ್‌ಮಾರ್ಕ್ ಕಚ್ಚಾ ತೈಲದಲ್ಲಿ 1.81 ಡಾಲರ್‌ಗಳ ಏರಿಕೆ ಕಂಡು ಪ್ರತೀ ಬ್ಯಾರೆಲ್‌ಗೆ 74.72 ಡಾಲರುಗಳಲ್ಲಿ ವ್ಯವಹಾರ ನಡೆಸಿದೆ.
ದಿನದ ವ್ಯವಹಾರದ ನಡುವೆ ಕಚ್ಚಾ ತೈಲವು 73.91 ಡಾಲರುಗಳಲ್ಲಿ ಪ್ರತೀ ಬ್ಯಾರೆಲ್‌ಗೆ ವ್ಯವಹಾರ ನಡೆಸಿತ್ತು. ಈ ವರ್ಷ ದಾಖಲಾದ ಗರಿಷ್ಠ ಕಚ್ಚಾ ತೈಲ ಬೆಲೆ ಇದಾಗಿದ್ದು, ಈ ಹಿಂದೆ ಜೂನ್ 11ರಂದು 73.23 ಡಾಲರು ದಾಖಲಿಸಿದ್ದೇ ಅತೀ ಹೆಚ್ಚು ಎಂದು ದಾಖಲಾಗಿತ್ತು.
ಯೂರೋಪಿಯನ್ ಆರ್ಥಿಕತೆ ಸ್ಥಿರತೆ ಕಾಪಾಡಿಕೊಂಡಿದೆ ಎಂದು ಆರ್ಥಿಕ ಮಾಹಿತಿ ಸಂಸ್ಥೆ 'ಮಾರ್ಕಿಟ್' ತನ್ನ ಸಂಯುಕ್ತ ಖರೀದಿ ವ್ಯವಸ್ಥಾಪಕರ ಸೂಚ್ಯಂಕವನ್ನಾಧರಿಸಿ ಹೇಳಿಕೆ ನೀಡಿದ ನಂತರ, ಬೆಳಿಗ್ಗೆಯೇ ಕಚ್ಚಾ ತೈಲ ಬೆಲೆ ಏರಲಾರಂಭಿಸಿತ್ತು.
ಯೂರೋಪ್ ಆರ್ಥಿಕ ಸಂಕಷ್ಟದಿಂದ ಹೊರ ಬಂದಲ್ಲಿ, ಯೂರೋ ಮತ್ತಷ್ಟು ಪ್ರಬಲವಾಗುತ್ತದೆ. ಅಂದರೆ ಅದರ ಅರ್ಥ ತೈಲಕ್ಕೆ ಹೆಚ್ಚು ಬೇಡಿಕೆ ಬರುತ್ತದೆ ಎಂದು ವಿಶ್ಲೇಷಕ ಫಿಲ್ ಫ್ಲಿನ್ ತಿಳಿಸಿದ್ದಾರೆ.