ದುರ್ಬಲ ಮಳೆ ಬ್ಯಾಂಕುಗಳ ಮೇಲೂ ದುಷ್ಪರಿಣಾಮ ಬೀರಬಹುದು ಎಂದಿರುವ ಭಾರತೀಯ ಬ್ಯಾಂಕುಗಳ ಅಸೋಸಿಯೇಷನ್ (ಐಬಿಎ), ರೈತರಿಂದ ಸಾಲ ಮರುಪಾವತಿಯ ಪ್ರಮಾಣ ಇಳಿಮುಖವಾಗುವ ಸಾಧ್ಯತೆಯಿದೆ ಎಂದಿದೆ.
ಮುಂಗಾರು ಬೆಳೆ ಕಟಾವಿನ ಬಗ್ಗೆ ಈಗಲೇ ಏನನ್ನೂ ಹೇಳಲಾಗದು. ಆದರೆ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಅದರ ಪರಿಣಾಮ ಕೃಷಿಯ ಮೇಲಾದರೆ ಕೃಷಿ ಸಾಲಗಳ ಮರುಪಾವತಿಯನ್ನು ರೈತರು ವಿಳಂಬವಾಗಿ ಮಾಡಬಹುದು. ಇದರಿಂದಾಗಿ ಬ್ಯಾಂಕುಗಳು ಸಮಸ್ಯೆಗಳನ್ನೆದುರಿಸಬೇಕಾದೀತು ಎಂದು ಐಬಿಎ ಅಧ್ಯಕ್ಷ ಎಂ.ವಿ. ನಾಯರ್ ತಿಳಿಸಿದ್ದಾರೆ.
PR
ಬರಗಾಲದ ಕಾರಣದಿಂದ ಕೃಷಿ ಕ್ಷೇತ್ರಕ್ಕೆ ಹಾನಿಯಾದಲ್ಲಿ ರೈತರಿಂದ ಸಾಲ ವಸೂಲಿ ಮಾಡುವುದು ಕಠಿಣವಾಗಬಹುದು. ಹಾಗೊಂದು ವೇಳೆ ಮುಂಗಾರು ಬೆಳೆಯ ಉತ್ಪನ್ನದಲ್ಲಿ ಕುಸಿತವಾದಲ್ಲಿ ಬ್ಯಾಂಕುಗಳ ಸಾಲದ ಅವಧಿಯನ್ನು ಅಧಿಕೃತವಾಗಿ ಘೋಷಿತವಾಗಿರುವ ಬರಗಾಲ ಪೀಡಿತ ಪ್ರದೇಶಗಳಲ್ಲಿ ವಿಸ್ತರಿಸಬೇಕಾಗಬಹುದು ಎಂದು ನಾಯರ್ ವಿವರಿಸಿದರು.
ಕಳೆದ ವರ್ಷದಂತೆ ವರ್ಷ ರೈತರ ಕೃಷಿಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾಪ ಸರಕಾರ ಮುಂದಿಲ್ಲ ಎಂದು ಕೆಲವು ದಿನಗಳ ಹಿಂದೆ ಬ್ಯಾಂಕ್ ಆಡಳಿತಗಳ ಮೇರು ಸಂಸ್ಥೆಯ ಮುಖ್ಯಸ್ಥ ವಿತ್ತ ಸಚಿವ ಪ್ರಣಬ್ ಮುಖರ್ಜಿ ಸ್ಪಷ್ಟಪಡಿಸಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.
ಭಾರತೀಯ ಬ್ಯಾಂಕ್ ಕ್ಷೇತ್ರವು ಜಾಗತಿಕ ಹಿಂಜರಿತದ ಪರಿಣಾಮಗಳನ್ನು ಸಮರ್ಥವಾಗಿ ನಿಭಾಯಿಸಿದೆ ಎಂದಿರುವ ನಾಯರ್, ದೇಶದ ಆರ್ಥಿಕ ಪ್ರಗತಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಏರಿಕೆಯಾಗುವ ಸಂಭವವಿದೆ ಎಂದರು.