ಬಾಸ್ಮತಿ ಅಕ್ಕಿಯ ಕನಿಷ್ಠ ರಫ್ತು ದರ (ಎಂಇಪಿ)ವನ್ನು ಪ್ರತೀ ಟನ್‌ಗೆ 1,100 ಅಮೆರಿಕನ್ ಡಾಲರುಗಳಿಂದ 800 ಡಾಲರುಗಳಿಗೆ ಇಳಿಕೆ ಮಾಡಲಾಗಿದೆ ಎಂದು ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.
ಬಾಸ್ಮತಿ ಅಕ್ಕಿಯ ಕನಿಷ್ಠ ರಫ್ತು ದರವನ್ನು ಪ್ರತೀ ಟನ್‌ಗೆ 800 ಡಾಲರುಗಳಿಗೆ ಇಳಿಸಲಾಗಿದೆ ಎಂದು ರಾಜ್ಯ ಕೃಷಿ ಸಚಿವರುಗಳ ಜತೆ ದೇಶದಲ್ಲಿನ ಬರಗಾಲದ ಕುರಿತು ಮಾತುಕತೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ ಪವಾರ್ ನುಡಿದರು.
ಹಣಕಾಸು ಸಚಿವ ಪ್ರಣಬ್ ಮುಖರ್ಜಿ ನೇತೃತ್ವದ ಅಧಿಕಾರಯುತ ಸಚಿವರ ಸಮೂಹ (ಇಜಿಓಎಂ)ವು ಆಹಾರ ವ್ಯವಸ್ಥೆಯ ಕುರಿತು ಇತ್ತೀಚೆಗಷ್ಟೇ ಮಾತುಕತೆ ನಡೆಸಿ ಬಾಸ್ಮತಿ ಅಕ್ಕಿಯ ಕನಿಷ್ಠ ರಫ್ತು ದರವನ್ನು ಕಡಿಮೆ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತ್ತು.
ಭಾರತದ ಒಟ್ಟಾರೆ ರಫ್ತು ಉದ್ಯಮವು ಹಿನ್ನಡೆ ಅನುಭವಿಸುತ್ತಿರುವ ಕಾರಣ ಕನಿಷ್ಠ ರಫ್ತು ದರವನ್ನು ಸರಕಾರ ಕಡಿಮೆಗೊಳಿಸಿದೆ ಎಂದು ಉದ್ಯಮದ ಮೂಲವೊಂದು ತಿಳಿಸಿದೆ. ಹಾಗೊಂದು ವೇಳೆ ಭಾರತವು ಕನಿಷ್ಠ ರಫ್ತು ದರವನ್ನು ಗರಿಷ್ಠ ಮಟ್ಟದಲ್ಲೇ ಮುಂದುವರಿಸಿದಲ್ಲಿ, ಇದರ ಲಾಭವನ್ನು ಜಾಗತಿಕ ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರ ಪಾಕಿಸ್ತಾನ ಪಡೆದುಕೊಳ್ಳಲಿದೆ ಎಂದು ಉದ್ಯಮ ವಾದಿಸಿತ್ತು.
ಬಾಸ್ಮತಿ ಅಕ್ಕಿಯ ಮತ್ತೊಂದು ರಫ್ತು ರಾಷ್ಟ್ರ ಪಾಕಿಸ್ತಾನವು ಪ್ರತೀ ಟನ್‌ಗೆ 700-800 ಅಮೆರಿಕನ್ ಡಾಲರುಗಳಲ್ಲೇ ರಫ್ತು ಮಾಡುತ್ತಿದೆ ಎಂದು ರಫ್ತುದಾರರು ತಿಳಿಸಿದ್ದಾರೆ.
ಅನಾವೃಷ್ಟಿ ಹಿನ್ನಲೆಯಲ್ಲಿ ಗೋಧಿ ಹಾಗೂ ಅಕ್ಕಿ ಸೇರಿದಂತೆ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದ್ದರಿಂದ ಬಾಸ್ಮತಿಯೇತರ ಅಕ್ಕಿ ರಫ್ತಿನ ಮೇಲೆ ಭಾರತ ನಿಷೇಧ ಹೇರಿದೆ. 2007-08ರ ಅವಧಿಯಲ್ಲಿ ಭಾರತವು 18 ಲಕ್ಷ ಟನ್ ಬಾಸ್ಮತಿ ಅಕ್ಕಿಯನ್ನು ವಿದೇಶಗಳಿಗೆ ರಫ್ತು ಮಾಡಿತ್ತು.