ಮುಗಿಬಿದ್ದ ದಾಸ್ತಾನುದಾರರು; ಚಿನ್ನ 135, ಬೆಳ್ಳಿ 350 ರೂ. ಏರಿಕೆ
ನವದೆಹಲಿ, ಶನಿವಾರ, 22 ಆಗಸ್ಟ್ 2009( 19:41 IST )
ವಿದೇಶೀ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ನಾಗಾಲೋಟದತ್ತ ಸಾಗುತ್ತಿರುವುದನ್ನು ಮನಗಂಡ ದಾಸ್ತಾನುದಾರರು ಖರೀದಿಗೆ ಮುಗಿ ಬಿದ್ದ ಕಾರಣ ಚಿನಿವಾರ ಪೇಟೆಯಲ್ಲಿ ಗರಿಷ್ಠ ಬೆಲೆ ದಾಖಲಾಗಿದೆ. ಶನಿವಾರದ ವ್ಯವಹಾರದಲ್ಲಿ ಚಿನ್ನ ಪ್ರತೀ 10 ಗ್ರಾಂಗೆ 135 ರೂಪಾಯಿಗಳ ಏರಿಕೆ ಕಂಡು 15,245 ರೂಪಾಯಿಗಳನ್ನು ತಲುಪಿತು.
ಮದುವೆ ಸಮಾರಂಭಗಳ ಹಿನ್ನಲೆಯಲ್ಲಿ ಕೈಗಾರಿಕಾ ಘಟಕಗಳು ಮತ್ತು ನಾಣ್ಯ ತಯಾರಕರು ಬೆಳ್ಳಿ ಖರೀದಿಗೆ ಮುಂದಾಗಿದ್ದು, ಪ್ರತೀ ಕಿಲೋವೊಂದರಲ್ಲಿ 350 ರೂಪಾಯಿಗಳ ಹೆಚ್ಚಳದೊಂದಿಗೆ 23,300 ರೂಪಾಯಿಗಳನ್ನು ದಾಖಲಿಸಿದೆ.
ಇತರ ದೇಶಗಳ ಕರೆನ್ಸಿಗಳೆದುರು ಕಳೆದ ರಾತ್ರಿ ಅಮೆರಿಕನ್ ಡಾಲರ್ ದುರ್ಬಲಗೊಂಡ ಕಾರಣ ಪ್ರತೀ ಔನ್ಸ್ ಚಿನ್ನಕ್ಕೆ 959.20 ಡಾಲರುಗಳನ್ನು ದಾಖಲಿಸಿತು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಉತ್ಕೃಷ್ಟ ಚಿನ್ನ ಮತ್ತು ಆಭರಣಗಳ ಬೆಲೆಯಲ್ಲಿ 135 ರೂಪಾಯಿಗಳ ಏರಿಕೆಯಾಗಿದ್ದು, ಕ್ರಮವಾಗಿ 15,245 ಹಾಗೂ 15,095 ರೂಪಾಯಿಗಳನ್ನು ಪ್ರತೀ 10 ಗ್ರಾಂಗಳಿಗೆ ದಾಖಲಿಸಿದೆ. ಆದರೆ ಪವನ್ ಚಿನ್ನ (ಎಂಟು ಗ್ರಾ) ಬೆಲೆ 12,500 ರೂಪಾಯಿಯಲ್ಲೇ ಮುಂದುವರಿದಿದೆ.
ಚಿನ್ನದ ಹಾದಿಯನ್ನೇ ಬೆಳ್ಳಿ ಕೂಡ ಹಿಡಿದಿದ್ದು, ಸಿದ್ಧ ಬೆಳ್ಳಿ ದರ 350 ರೂಪಾಯಿಗಳ ಏರಿಕೆಯೊಂದಿಗೆ ಪ್ರತೀ ಕೇಜಿಗೆ 23,300 ರೂಪಾಯಿಗಳನ್ನು ದಾಖಲಿಸಿತು. ವಾರವನ್ನಾಧರಿಸಿದ ಬೆಳ್ಳಿಯಲ್ಲಿ 380 ರೂಪಾಯಿಗಳ ಏರಿಕೆ ಕಂಡಿದ್ದು, 23,120 ರೂಪಾಯಿಗಳಲ್ಲಿ ವ್ಯವಹಾರ ನಡೆಸಿದೆ.
ಆದರೆ ಬೆಳ್ಳಿ ನಾಣ್ಯಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಖರೀದಿಗೆ 29,900 ಹಾಗೂ ಮಾರಾಟಕ್ಕೆ 30,000 ರೂಪಾಯಿಗಳನ್ನು ಪ್ರತೀ 100 ನಾಣ್ಯಗಳಿಗೆ ಇಂದೂ ಕೂಡ ದಾಖಲಾಗಿದೆ.