ಅಬುಧಾಬಿ ವಿಮಾನ ನಿಲ್ದಾಣದ ಟ್ರಾಫಿಕ್‌ನಲ್ಲಿ ಭಾರತದ್ದೇ ಸಿಂಹಪಾಲು
ದುಬೈ, ಶನಿವಾರ, 22 ಆಗಸ್ಟ್ 2009( 20:20 IST )
ದುಬೈಯ ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣ ಅಬುಧಾಬಿಯ ಮೂಲಕ ಈ ವರ್ಷ ಶೇಕಡಾ 18.9ಕ್ಕೂ ಹೆಚ್ಚು ಭಾರತೀಯರು ಪ್ರಯಾಣ ಬೆಳೆಸುವುದರೊಂದಿಗೆ ಇಲ್ಲಿನ ವಾಯು ಸಂಚಾರದಲ್ಲಿ ಪ್ರಮುಖ ಪಾತ್ರವಹಿಸಿದ ಕೀರ್ತಿ ಭಾರತಕ್ಕೆ ಸಂದಿದ್ದು, ಅಗ್ರ ಸ್ಥಾನದಲ್ಲಿಯೇ ಮುಂದುವರಿದಿದೆ.
ಈ ವಿಮಾನ ನಿಲ್ದಾಣವು ಈ ವರ್ಷ ಶೇ.10.3ರಷ್ಟು ಪ್ರಯಾಣಿಕರ ಹೆಚ್ಚಳ ಕಂಡಿದೆ. ಒಟ್ಟಾರೆ ಪ್ರಯಾಣಿಕರಲ್ಲಿ ಅಗ್ರ ಸ್ಥಾನ ಭಾರತೀಯರದ್ದು. ಎರಡನೇ ಸ್ಥಾನ ಪಾಕಿಸ್ತಾನಕ್ಕೆ ಸಂದಿದೆ ಎಂದು ಅಬುಧಾಬಿ ವಿಮಾನಿಲ್ದಾಣ ಸಂಸ್ಥೆ (ಎಡಿಎಸಿ) ತಿಳಿಸಿದೆ.
ಕಳೆದ ವರ್ಷದ ಜುಲೈ ತಿಂಗಳಲ್ಲಿ 8,37,129 ಪ್ರಯಾಣಿಕರಿಂದ ಬಳಸಲ್ಪಟ್ಟಿದ್ದ ಈ ವಿಮಾನ ನಿಲ್ದಾಣವು ಈ ವರ್ಷದ ಅದೇ ತಿಂಗಳಲ್ಲಿ 9,23,124 ಪ್ರಯಾಣಿಕರ ಸಂಚಾರವನ್ನು ದಾಖಲಿಸಿದ್ದು, ವೃದ್ಧಿ ಕಂಡಿದೆ.
50,900 ಪ್ರಯಾಣಿಕರ ಮೂಲಕ ಅತಿ ದಟ್ಟನೆಯ ಹೆಸರು ಲಂಡನ್‌ಗೆ ಸಂದಿದೆ. ಎರಡನೇ ಸ್ಥಾನ 40,465 ಪ್ರಯಾಣಿಕರನ್ನು ಸಾಗಿಸಿದ ಬ್ಯಾಂಕಾಕ್ ವಿಮಾನ ನಿಲ್ದಾಣದ್ದು.
ಈ ವರ್ಷದ ಜುಲೈ ತಿಂಗಳಲ್ಲಿ 32,895 ಪ್ರಯಾಣಿಕರ ಆಗಮನ ಮತ್ತು ನಿರ್ಗಮನಕ್ಕೆ ಸಾಕ್ಷಿಯಾಗುವ ಮೂಲಕ ಅತೀ ಹೆಚ್ಚು ಪ್ರಯಾಣಿಕರ ದಟ್ಟನೆ ಈ ವಿಮಾನ ನಿಲ್ದಾಣದಲ್ಲಿ ದಾಖಲಾಗಿದೆ. ಪ್ರಯಾಣಿಕರ ಒಟ್ಟಾರೆ ದೈನಂದಿನ ಸರಾಸರಿ 29,799.