ವಜಾಗೊಂಡ ಇಬ್ಬರು ಪೈಲಟ್‌ಗಳನ್ನು ಪುನರ್ ನೇಮಕ ಮಾಡಿಕೊಳ್ಳದಿರುವ ಕ್ರಮವನ್ನು ಖಂಡಿಸಿ ಜೆಟ್ ಏರ್‌ವೇಸ್ ಪೈಲಟ್‌ಗಳು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿದ್ದ ಜೆಟ್ ಏರ್‌ವೇಸ್ ಪೈಲಟ್‌ಗಳ ಸಂಘಟನೆ ಸೇರಿದ ಕಾರಣಕ್ಕಾಗಿ ಜೆಟ್ ಏರ್‌ವೇಸ್ ಖಾಸಗಿ ವಿಮಾನಯಾನ ಸಂಸ್ಥೆಯು ತನ್ನ ಇಬ್ಬರು ಉದ್ಯೋಗಿಗಳಾದ ಕ್ಯಾಪ್ಟನ್ ಸ್ಯಾಮ್ ಥಾಮಸ್ ಮತ್ತು ಕ್ಯಾಪ್ಟನ್ ಬಲರಾಮನ್‌ರವರನ್ನು ವಜಾ ಮಾಡಿತ್ತು.
ಸೋಮವಾರ ಪೈಲಟ್‌ಗಳ ಸಂಘಟನೆಯು ವಿಮಾನಯಾನ ಸಂಸ್ಥೆಗೆ ಎರಡು ವಾರಗಳ ಗಡುವು ನೀಡಲಿದ್ದು, ಆಡಳಿತ ಮಂಡಳಿಯು ಉದ್ಯೋಗಿಗಳನ್ನು ಮರಳಿ ಕರ್ತವ್ಯಕ್ಕೆ ಸೇರಿಸಿಕೊಳ್ಳದಿದ್ದರೆ ಸೆಪ್ಟೆಂಬರ್ 7ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿರುವುದಾಗಿ ತಿಳಿಸಿದೆ.
ಕಳೆದ 15 ದಿನಗಳಿಗೂ ಹಿಂದೆ ಇಬ್ಬರು ಹಿರಿಯ ಕಮಾಂಡರ್‌ಗಳಿಗೆ ಜೆಟ್ ಏರ್‌ವೇಸ್ ವಜಾ ಆದೇಶ ಪತ್ರವನ್ನು ನೀಡಿತ್ತು. ಇದಕ್ಕೆ ಪ್ರತಿಭಟನೆ ವ್ಯಕ್ತವಾದ ನಂತರ ವಜಾಗೊಂಡ ಇಬ್ಬರು ಪೈಲಟ್‌ಗಳು ಮೇಲ್ಮನವಿ ಸಲ್ಲಿಸುವಂತೆ ವಿಮಾಯಾನ ಸಂಸ್ಥೆಯ ಆಡಳಿತ ಮಂಡಳಿಯು ಸೂಚಿಸಿತ್ತು. ಆದರೆ ಇದುವರೆಗೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ.