ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ತಕ್ಷಣಕ್ಕೆ ಏರಿಸುವ ಸಾಧ್ಯತೆಗಳನ್ನು ತಳ್ಳಿ ಹಾಕಿರುವ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದಿಯೋರಾ, ಕಚ್ಚಾ ತೈಲ ಸ್ಥಿರತೆ ಕಂಡುಕೊಂಡ ನಂತರ ಮುಂದಿನ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.
ಈ ಪರಿಸ್ಥಿತಿಯಲ್ಲಿ ಪೆಟ್ರೋಲಿಯಂ ದರ ಪರಿಷ್ಕರಣೆ ಕುರಿತು ಮಾತನಾಡುವ ಅಗತ್ಯವಿಲ್ಲ ಎಂದರು.
ಪ್ರತಿ ದಿನ ಕಚ್ಚಾ ತೈಲ ದರಗಳು ಮೇಲೆ-ಕೆಳಗೆ ಓಲಾಡುತ್ತಿವೆ. ಪ್ರತೀ ದಿನ ಏನಾಗುತ್ತದೆ ಎಂಬುದನ್ನು ಯಾರೂ ನಿರ್ಧರಿಸಲಾಗದು. ದರಗಳು ಸ್ಥಿರ ಮಟ್ಟ ಕಾಯ್ದುಕೊಳ್ಳಬೇಕು. ನಾವು ಇದರ ಬಗ್ಗೆ ತಿಂಗಳು ಅಥವಾ ಐದು ವಾರಗಳ ಕಾಲ ಪರಿಶೀಲನೆ ನಡೆಸುತ್ತೇವೆ ಎಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ದಿಯೋರಾ ಪತ್ರಕರ್ತರಿಗೆ ತಿಳಿಸಿದ್ದಾರೆ.
ಪ್ರಸಕ್ತ ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ಒಂದಕ್ಕೆ 75 ಡಾಲರುಗಳ ಸನಿಹ ಬೆಲೆಯಿದ್ದು, ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಯಾವ ಹಂತದಲ್ಲಿ ತೆಗೆದುಕೊಳ್ಳುತ್ತದೆ ಎಂಬ ಪ್ರಶ್ನೆಗವರು, ಏನಾಗುತ್ತದೆ ಎಂಬುದನ್ನು ಗಮನಿಸಿದ ನಂತರ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.
ಜುಲೈ 1ರಂದು ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಪ್ರತೀ ಲೀಟರ್‌ಗೆ ಕ್ರಮವಾಗಿ ನಾಲ್ಕು ಹಾಗೂ ಎರಡು ರೂಪಾಯಿಗಳ ಏರಿಕೆ ಮಾಡಿದ್ದವು. ಆ ಮೂಲಕ ತೈಲ ಕಂಪನಿಗಳಿಗೆ ನಷ್ಟವಾಗದಂತೆ ಸರಕಾರ ನೋಡಿಕೊಂಡಿತ್ತು.
ಈಗ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸ್ಥಿರತೆ ಕಾಯ್ದುಕೊಂಡಿಲ್ಲ. ಪ್ರತೀ ದಿನ ಬದಲಾಗುತ್ತಿರುವ ದರದಿಂದಾಗಿ ನಿರ್ದಿಷ್ಠ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವೇ ದಿನಗಳಲ್ಲಿ ಚಂಚಲತೆಯನ್ನು ಹೊರತುಪಡಿಸಿದ ವಾತಾವರಣವು ಸೃಷ್ಟಿಯಾಗಬಹುದೆಂದು ನಿರೀಕ್ಷಿಸಲಾಗುತ್ತಿದೆ.