ಉದ್ಯಮದ ವಿವಿಧ ವಿಭಾಗಗಳು ಚೇತರಿಕೆಯ ಲಕ್ಷಣಗಳನ್ನು ತೋರಿಸುತ್ತಿದ್ದು, 2009-10ರ ಸಾಲಿನಲ್ಲಿ ಭಾರತದ ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ) ದರವು ಶೇ.7ಕ್ಕೆ ಪ್ರಗತಿ ಕಾಣಲಿದೆ ಎಂದು ಸಿಐಐ-ಅಸ್ಕಾನ್ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.
ಈ ಹಿಂದಿನ ಆರ್ಥಿಕ ವರ್ಷದಲ್ಲಿ ಶೇ.6.7ರ ಆರ್ಥಿಕ ಪ್ರಗತಿ ದಾಖಲಾಗಿತ್ತು. ಪ್ರಸಕ್ತ ಹಣಕಾಸಿನ ವರ್ಷದಲ್ಲಿ ಶೇ.6.5ರಿಂದ 7ರಷ್ಟು ಪ್ರಗತಿ ದರ ದಾಖಲಾಗಲಿದೆ ಎಂದಿರುವ ಸಮೀಕ್ಷೆ, '2009-10ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಉದ್ಯಮವು ಸ್ಥಿರತೆಯನ್ನು ತೋರಿಸಿದೆ' ಎಂದು ವಿವರಣೆ ನೀಡಿದೆ.
ಲಭ್ಯವಿರುವ ಉದ್ಯಮದ 515 ಸಂಸ್ಥೆಗಳ ಜೂನ್ ಅಂತ್ಯಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕ ಅವಧಿಯನ್ನೇ ಗಮನಿಸಿದಾಗ, ನಿವ್ವಳ ಪ್ರಗತಿಯಲ್ಲಿ ಕೊರತೆ ಕಂಡಿದ್ದರೂ ಲಾಭದಲ್ಲಿ ಸುಧಾರಣೆಯಾಗಿತ್ತು ಎಂದು ಅದು ತಿಳಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದಾಗ ರಸಗೊಬ್ಬರ, ಸಿಮೆಂಟ್ ಮತ್ತು ದ್ವಿಚಕ್ರ ವಾಹನಗಳ ಉದ್ಯಮಗಳು 2009-10ರ ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಗರಿಷ್ಠ ಪ್ರಮಾಣದ ಪ್ರಗತಿ ದಾಖಲಿಸಿವೆ.
ಕೈಗಾರಿಕಾ ಅನಿಲಗಳು ಮತ್ತು ಸ್ಕೂಟರ್‌ನಂತಹ ಅಟೋಮೊಬೈಲ್ ಕ್ಷೇತ್ರಗಳೂ ಅತ್ಯುತ್ತಮ ಪ್ರಗತಿ ಹೊಂದಿವೆ ಎಂದು ಈ ಸಮೀಕ್ಷೆ ತಿಳಿಸಿದೆ.
ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಪೋಲಿಸ್ಟರ್ ಫೈಬರ್, ತ್ರಿಚಕ್ರ ವಾಹನಗಳು, ಅಣುಶಕ್ತಿ ಇಂಧನ ಉದ್ಯಮಗಳು ಋಣಾತ್ಮಕ ವಲಯದಿಂದ ಹೊರಗೆ ಬಂದಿವೆ ಎಂದು ಸಮೀಕ್ಷೆ ವಿವರಣೆ ನೀಡಿದೆ.