ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‌ರನ್ನು ನೋಕಿಯಾ ಕಾರ್ಪೊರೇಷನ್ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಒಲ್ಲಿ-ಪೆಕ್ಕಾ ಕಲ್ಲಾಸುವೋ ಭೇಟಿಯಾಗಿದ್ದು, ಕಂಪನಿಗಳ ಬಗ್ಗೆ ಸರಕಾರ ತಳೆದಿರುವ ನೀತಿಗಳ ಬಗ್ಗೆ ಚರ್ಚಿಸಿದ್ದಾರೆ.
ಶುಕ್ರವಾರ ಪ್ರಧಾನಿಯವರನ್ನು ಭೇಟಿ ಮಾಡಿದ ಕಲ್ಲಾಸುವೋ, ಭಾರತದಲ್ಲಿ ಮೊಬೈಲ್ ಸೇವೆಯನ್ನು ವಿಸ್ತರಿಸಲು ಕಂಪನಿ ಅನುಸರಿಸುತ್ತಿರುವ ನೀತಿಗಳನ್ನು ವಿವರವಾಗಿ ಮನದಟ್ಟು ಮಾಡಿದರು ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ಭಾರತದ ದೂರವಾಣಿ ಉದ್ಯಮಕ್ಕೆ ಪುನರ್ ಸಾಮರ್ಥ್ಯವನ್ನು ನೀಡುವ ಬಗ್ಗೆಯೂ ಪ್ರಧಾನಿಯವರೊಂದಿಗೆ ಕಲ್ಲಾಸುವೋ ಸಮಾಲೋಚನೆ ನಡೆಸಿದರು. ಅಂತಹ ನಿರ್ಧಾರ ಕೈಗೊಂಡಲ್ಲಿ ದೇಶದ ಮೊಬೈಲ್ ಸೇವೆ ವೃದ್ಧಿಯಲ್ಲಿ ತಾನು ಪ್ರಮುಖ ಪಾತ್ರವಹಿಸುವುದಾಗಿ ಕಂಪನಿ ಭರವಸೆ ನೀಡಿತು ಎನ್ನಲಾಗಿದೆ.
ಭಾರತಕ್ಕೆ ಮೂರು ದಿನಗಳ ಭೇಟಿಗಾಗಿ ಆಗಮಿಸಿದ್ದ ನೋಕಿಯಾ ಮುಖ್ಯಸ್ಥ ಸರಕಾರಿ ಅಧಿಕಾರಿಗಳು ಹಾಗೂ ಉದ್ಯಮದ ಪ್ರಮುಖರನ್ನು ಮುಖಾಮುಖಿಯಾಗಿ ಮಾತುಕತೆ ನಡೆಸಿದರು.
ಮೊಬೈಲ್ ಮಾರುಕಟ್ಟೆಯಲ್ಲಿ ನೋಕಿಯಾ ಭಾರತದಲ್ಲಿ ನಂ.1 ಸ್ಥಾನದಲ್ಲಿದ್ದು, ಜಗತ್ತಿನಲ್ಲೇ ಎರಡನೇ ಸ್ಥಾನ ಪಡೆದಿರುವ ಹೆಗ್ಗಳಿಕೆ ಇದರದ್ದು. ಫಿನ್‌ಲೆಂಡ್ ಮೂಲದ ಕಂಪನಿಯು ಚೆನ್ನೈಯಲ್ಲಿ ಪ್ರಮುಖ ಉತ್ಪಾದನಾ ಘಟಕ ಹೊಂದಿದ್ದು, ಇಲ್ಲಿಂದ ಹಲವಾರು ದೇಶಗಳಿಗೆ ಮೊಬೈಲ್ ರಫ್ತು ಮಾಡುತ್ತಿದೆ.