ರಾಜ್ಯದ ಸಾಲಮನ್ನಾಕ್ಕೆ ತಾನು ಹೊಣೆಯಲ್ಲ: ಕೇಂದ್ರ ಸ್ಪಷ್ಟನೆ
ಬೆಂಗಳೂರು, ಸೋಮವಾರ, 24 ಆಗಸ್ಟ್ 2009( 10:40 IST )
ರೈತರಿಗೆ ನೀಡಲಾಗುವ ಶೇ.3ರ ಬೆಳೆ ಸಾಲದಲ್ಲಿ ರಾಜ್ಯಕ್ಕೆ ತಾನೂ ಸಹಕಾರ ನೀಡುವುದಾಗಿ ಕೇಂದ್ರ ಸರಕಾರ ತಿಳಿಸಿದೆ. ಆದರೆ 2006-07ರ ಸಾಲಿನಲ್ಲಿ ರಾಜ್ಯ ಸರಕಾರ ಮಾಡಿದ್ದ ಸಾಲಮನ್ನಾಕ್ಕೆ ತಾನು ಜವಾಬ್ದಾರನಲ್ಲ ಎಂದು ಸ್ಪಷ್ಟಪಡಿಸಿದೆ.
ರೈತರಿಗೆ ಬ್ಯಾಂಕುಗಳು ನೀಡುವ ಕೃಷಿ ಸಾಲವನ್ನು ಶೇ.7ರ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ಇದರಲ್ಲಿ ಶೇ.3ರ ಬಡ್ಡಿಯನ್ನು ಮಾತ್ರ ರೈತರು ಬ್ಯಾಂಕುಗಳಿಗೆ ಪಾವತಿ ಮಾಡಬೇಕು. ಉಳಿದ ಶೇ.4ನ್ನು ರಾಜ್ಯ ಸರಕಾರವೇ ಭರಿಸುತ್ತಿದೆ. ಇದು ಸಾಲ ಮರುಪಾವತಿಯನ್ನು ನಿಗದಿತ ಅವಧಿಯಲ್ಲಿ ಮಾಡಿದ ರೈತರಿಗೆ ಮಾತ್ರ ಲಭ್ಯವಿದೆ.
ಬೆಳೆ ಸಾಲದಲ್ಲಿ ರಾಜ್ಯ ಸರಕಾರ ನೀಡುತ್ತಿರುವ ಶೇ.4ರಲ್ಲಿ ತಾನು ಶೇ.1ನ್ನು ವಹಿಸಿಕೊಳ್ಳುವುದಾಗಿ ಕೇಂದ್ರ ಸರಕಾರ ಇದೀಗ ಭರವಸೆ ನೀಡಿದೆ. ಇದರಿಂದಾಗಿ ರಾಜ್ಯವೀಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಕೇಂದ್ರ ಸರಕಾರದಿಂದ ಈ ಕುರಿತು ಮಾಹಿತಿ ಬಂದಿದ್ದು, ಈ ಹಿಂದೆ ಹೊರಡಿಸಲಾಗಿದ್ದ ಆದೇಶವನ್ನು ಪರಿಷ್ಕರಣೆ ಮಾಡುವ ನಿರ್ಧಾರಕ್ಕೆ ರಾಜ್ಯ ಸರಕಾರ ಬಂದಿದೆ. ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಪಡೆದುಕೊಂಡ ನಂತರ ಹೊಸ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ರಾಜ್ಯ ಸರಕಾರ ಮಾಡಿದ್ದ ಮತ್ತೊಂದು ಮನವಿಯನ್ನು ಕೇಂದ್ರ ತಿರಸ್ಕರಿಸಿದೆ. 2006-07ರ ಸಾಲಿನಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರದ ಆಡಳಿತದ ಸಂದರ್ಭದಲ್ಲಿ ಮಾಡಲಾಗಿದ್ದ ರೈತರ ಸಾಲ ಮನ್ನಾವನ್ನು ಕೇಂದ್ರ ಒದಗಿಸಬೇಕು ಎಂದು ರಾಜ್ಯ ಮನವಿ ಮಾಡಿತ್ತು. ಆದರೆ ಇದಕ್ಕೆ ಕೇಂದ್ರ ಯಾವುದೇ ಮನ್ನಣೆ ನೀಡಿಲ್ಲ.