ಸತ್ಯಂ ಕಂಪ್ಯೂಟರ್ಸ್ ಬಹುಕೋಟಿ ಹಗರಣದಲ್ಲಿ ಪ್ರಮುಖ ಶೇರು ದಲ್ಲಾಳಿಯೊಬ್ಬರ ಪಾತ್ರವಿದೆ ಎಂದು ಹೇಳಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ), ಶೀಘ್ರದಲ್ಲಿಯೇ ಈ ಸಂಬಂಧ ಮತ್ತೊಂದು ಚಾರ್ಜ್‌ಶೀಟ್ ದಾಖಲಿಸಲಿರುವುದಾಗಿ ಹೇಳಿದೆ.
ಅದೇ ಹೊತ್ತಿಗೆ ಸತ್ಯಂ ಕಂಪ್ಯೂಟರ್ಸ್‌ನ ವಿದೇಶಿ ಹಣಕಾಸು ಮೂಲಗಳ ಕುರಿತು ತನಿಖೆ ನಡೆಸಲು ಸಿಬಿಐ ಅನುಮತಿಯನ್ನು ಪಡೆದುಕೊಂಡಿದೆ.
ಸತ್ಯಂ ಹಗರಣದಲ್ಲಿ ಮುಂಚೂಣಿಯಲ್ಲಿರುವ ಶೇರು ದಲ್ಲಾಳಿಯೊಬ್ಬನ ಪಾತ್ರವಿರುವುದು ತನಿಖೆಯ ಸಂದರ್ಭದಲ್ಲಿ ಗಮನಕ್ಕೆ ಬಂದಿದ್ದು, ಮತ್ತಷ್ಟು ತನಿಖೆಯ ಅಗತ್ಯವಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಆದರೆ ಆ ಶೇರು ದಲ್ಲಾಳಿಯ ಹೆಸರನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ. ಆತನ ವಿರುದ್ಧ ಹಲವು ಪ್ರಕರಣಗಳನ್ನು ಸಿಬಿಐ ದಾಖಲಿಸಲಿರುವುದನ್ನು ಅವರು ಖಚಿತಪಡಿಸಿದ್ದಾರೆ.
ಅಮೆರಿಕಾ ತನಿಖೆ ಪೂರ್ಣ.. ಈ ನಡುವೆ ಸತ್ಯಂ ಪ್ರಕರಣದ ಸಂಬಂಧ ಅಮೆರಿಕಾದಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಭಾರತಕ್ಕೆ ಬಂದಿದ್ದ ಅಮೆರಿಕಾ ಶೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆಯು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದು, ತನಿಖಾ ಕಾರ್ಯ ಪೂರ್ಣಗೊಳಿಸಿದೆ.
ಅಮೆರಿಕಾದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ ತಂಡವು ಹೈದರಾಬಾದ್‌ಗೆ ಬಂದು ಸತ್ಯಂ ಕಂಪ್ಯೂಟರ್ಸ್ ಹಗರಣದ ಕುರಿತು ಸಿಬಿಐ ತಂಡದ ಜತೆ ಸಮಾಲೋಚನೆ ನಡೆಸಿತ್ತು.
ಬಹುಕೋಟಿ ಹಗರಣದ ರೂವಾರಿ ಬಿ. ರಾಮಲಿಂಗಾ ರಾಜು ಸ್ಥಾಪಿಸಿದ್ದ ಸತ್ಯಂ ಕಂಪ್ಯೂಟರ್ಸ್ ನ್ಯೂಯಾರ್ಕ್ ಶೇರು ಮಾರುಕಟ್ಟೆಯಲ್ಲಿ ಸ್ಥಾನ ಪಡೆದುಕೊಂಡಿದ್ದ ಕಾರಣ ಅಮೆರಿಕಾ ಆರ್ಥಿಕ ವಹಿವಾಟುಗಳ ಬಗ್ಗೆ ತನಿಖೆ ಮಾಡುವ ನಿರ್ಧಾರಕ್ಕೆ ಬಂದಿತ್ತು.