ಹೋಂಡಾ ಮೋಟಾರ್ ಕಂಪನಿಯು 2010ರ ವೇಳೆಗೆ ಅಮೆರಿಕಾ ಮಾರುಕಟ್ಟೆಯಲ್ಲಿ ವಿದ್ಯುತ್ ಚಾಲಿತ ಕಾರುಗಳನ್ನು ಪರಿಚಯಿಸಲಿದ್ದು, ಇತರ ಎರಡು ದೇಶೀಯ ಕಂಪನಿಗಳ ಜತೆ ಪೈಪೋಟಿಗಿಳಿಯಲು ಸಿದ್ಧವಾಗುತ್ತಿದೆ.
PR
ಅಮೆರಿಕಾ ಮಾರುಕಟ್ಟೆಗಾಗಿ ಸಂಪೂರ್ಣ ಸುಧಾರಿತ ತಂತ್ರಜ್ಞಾನವನ್ನೊಳಗೊಂಡ ವಿದ್ಯುತ್ ಚಾಲಿತ ಕಾರನ್ನು ಹೋಂಡಾ ಕಂಪನಿಯು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಲು ಯೋಚಿಸುತ್ತಿದೆ. ಇದು ಬಹುತೇಕ ಪರಿಸರ ಸ್ನೇಹಿಯಾಗಿರುತ್ತದೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ಜಪಾನ್‌ನ ಇತರೆರಡು ಬೃಹತ್ ವಾಹನ ತಯಾರಿಕಾ ಕಂಪನಿಗಳು ಈಗಾಗಲೇ ವಿದ್ಯುತ್ ಚಾಲಿತ ವಾಹನಗಳನ್ನು ಬಿಡುಗಡೆ ಮಾಡುವ ಬಗ್ಗೆ ಪ್ರಕಟನೆಗಳನ್ನು ಹೊರಡಿಸಿವೆ.
ಟೊಯೊಟಾ ಮೋಟಾರ್ ಕಾರ್ಪೊರೇಷನ್ ಅಮೆರಿಕಾದಲ್ಲಿ 2012ರಿಂದ ವಿದ್ಯುತ್ ಚಾಲಿತ ಕಾರುಗಳನ್ನು ಮಾರಾಟ ಮಾಡುವ ಯೋಜನೆ ಹೊಂದಿದ್ದರೆ, ನಿಸ್ಸಾನ್ ಮೋಟಾರ್ ಕಂಪನಿಯು ಜಪಾನ್, ಯೂರೋಪ್ ಮತ್ತು ಅಮೆರಿಕಾ ಮಾರುಕಟ್ಟೆಗಳಲ್ಲಿ ತನ್ನ ಕಾರುಗಳನ್ನು ಬಿಡುಗಡೆ ಮಾಡಲು 2010ರಲ್ಲಿ ಬೃಹತ್ ಪ್ರಮಾಣದ ಉತ್ಪಾದನೆ ಆರಂಭಿಸುವುದಾಗಿ ಹೇಳಿಕೊಂಡಿದೆ.
ಪ್ರಸಕ್ತ ಅಮೆರಿಕಾದಲ್ಲಿ ಚಾಲ್ತಿಯಲ್ಲಿರುವ ವಿದ್ಯುತ್ ಚಾಲಿತ ಕಾರುಗಳಿಗಿಂತ ಭಿನ್ನವಾದ ಮಾದರಿಯನ್ನು ಹೊಂದುವ ಬಯಕೆ ಹೋಂಡಾ ಕಂಪನಿಯದ್ದು. ಅದರಲ್ಲಿ ಲೈಟ್, ಬ್ಯಾಟರಿ ಸಹಿತ ವಿವಿಧ ಭಾಗಗಳಲ್ಲಿ ಸುಧಾರಿತ ತಂತ್ರಜ್ಞಾನವಿರುತ್ತದೆ ಎಂಬ ಭರವಸೆಯನ್ನು ಕಂಪನಿ ನೀಡಿದೆ.
ಅಂದಾಜು ಲೆಕ್ಕಾಚಾರಗಳ ಪ್ರಕಾರ ಅಮೆರಿಕಾವು 1992ರಲ್ಲಿ ಕೇವಲ 1,600ರಷ್ಟು ವಿದ್ಯುತ್ ಚಾಲಿತ ಕಾರುಗಳನ್ನು ಹೊಂದಿತ್ತು. 2007ರ ಹೊತ್ತಿಗೆ 55,000ಕ್ಕೂ ಹೆಚ್ಚು ಕಾರುಗಳನ್ನು ಹೊಂದಿದ ಕೀರ್ತಿ ಜಗತ್ತಿನ ದೊಡ್ಡಣ್ಣನದ್ದು.
ಪ್ರತೀ ವರ್ಷ ಶೇ.25ಕ್ಕೂ ಹೆಚ್ಚು ಮಾರಾಟ ಪ್ರಗತಿಯನ್ನು ಈ ಕ್ಷೇತ್ರದಲ್ಲಿ ಸಾಧಿಸಲಾಗುತ್ತಿದೆ ಎಂದು ಉದ್ಯಮ ವಲಯಗಳು ತಿಳಿಸಿವೆ. ಪರಿಸರ ಸ್ನೇಹಿಯಾಗಿರುವುದರಿಂದ ಸರಕಾರಗಳು ಕೂಡ ಇದಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿವೆ.