ಏರ್ ಇಂಡಿಯಾವು ಜೀವಂತವಾಗಿ ಉಳಿಯಬೇಕಾದರೆ ಸುಮಾರು 3100 ಕೋಟಿ ರೂ.ಗಳ (620 ಮಿಲಿಯನ್ ಡಾಲರ್) ಬೇಲೌಟ್ ಪ್ಯಾಕೇಜ್ ಅಗತ್ಯವಿದೆ ಎಂದು ತಿಳಿಸಿರುವ ನಾಗರಿಕ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್, ರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ಸುಧಾರಿಸಿಕೊಳ್ಳುವ ಭರವಸೆ ತನಗಿದೆ ಎಂದಿದ್ದಾರೆ.
PR
ಮಾರ್ಚ್ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಏರ್ ಇಂಡಿಯಾ ಸುಮಾರು 5150 ಕೋಟಿ ರೂಪಾಯಿಗಳ (1.03 ಬಿಲಿಯನ್ ಡಾಲರ್) ನಷ್ಟ ಅನುಭವಿಸಿದೆ.
ಅಲ್ಲದೆ ಇತರ ಭಾರತೀಯ ವಿಮಾನಯಾನ ಸಂಸ್ಥೆಗಳು ಕೂಡ ಆರ್ಥಿಕ ಹಿಂಜರಿತದಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಮತ್ತು ಉದ್ಯಮದಲ್ಲಿನ ಅತ್ಯಧಿಕ ವೆಚ್ಚಗಳ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ.
ವಿಮಾನಯಾನ ಸಂಸ್ಥೆಯು ಸಂಕಷ್ಟದಿಂದ ಪಾರಾಗಲಿದೆ. ಪ್ರತೀ ಬಾರಿ ಅದು ಎದುರಾದ ಸಮಸ್ಯೆಗಳಿಂದ ಅದು ಮೇಲಕ್ಕೆ ಬಂದಿದೆ ಮತ್ತು ಈ ಬಾರಿಯೂ ಅದೇ ರೀತಿ ನಡೆಯಲಿದೆ ಎಂದು ಭಾರತದ ವ್ಯಾವಹಾರಿಕ ಪತ್ರಿಕೆಯೊಂದರ ಜತೆ ಮಾತನಾಡುತ್ತಾ ಪಟೇಲ್ ತಿಳಿಸಿದ್ದಾರೆ.
ರಾಷ್ಟ್ರದ ಹೆಮ್ಮೆಯ ವಿಮಾನಯಾನ ಸಂಸ್ಥೆಗೆ ಸರಕಾರವು ಪರಿಹಾರ ಧನ ನೀಡಬೇಕೆಂದು ನಾನು ಬಯಸುತ್ತಿಲ್ಲ. ಆದರೆ ನಾವು ಪಾಲುದಾರರಾಗಿ ಕೆಲವು ವಿಚಾರಗಳತ್ತ ಗಮನ ಹರಿಸಲಿದ್ದೇವೆ ಎಂದು ನುಡಿದರು.
ವಿಮಾನಯಾನ ಸಂಸ್ಥೆಯು ಸುಮಾರು 3,100 ಕೋಟಿ ರೂಪಾಯಿಗಳ ಶೇರು ಉತ್ತೇಜನ ಮತ್ತು ದೊಡ್ಡ ಮೊತ್ತದ ಸಾಲವನ್ನು ಕಿರಿದಾಗಿಸುವ ಅಗತ್ಯವಿದೆ ಎಂದು ಪಟೇಲ್ ತಿಳಿಸಿದ್ದಾರೆ.
ದೇಶದ ವಿಮಾನಯಾನ ಸಂಸ್ಥೆಗಳನ್ನು ರಕ್ಷಿಸುವ ಸಲುವಾಗಿ ರಾಜ್ಯಗಳು ವೈಮಾನಿಕ ಇಂಧನ ದರದ ಮೇಲಿನ ತೆರಿಗೆಗಳನ್ನು ಕಡಿಮೆಗೊಳಿಸಬೇಕು ಎಂಬ ಏರ್‌ಲೈನ್ಸ್‌ಗಳ ಬೇಡಿಕೆಗೆ ತನ್ನ ಬೆಂಬಲವಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಶೇ.30ರವರೆಗಿನ ತೆರಿಗೆಗಳಿಂದಾಗಿ ವೈಮಾನಿಕ ಇಂಧನ ದುಬಾರಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.