ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರು ಕೆಲವು ಸ್ನಾತಕೋತ್ತರ ಪದವಿಗಳನ್ನು ಹೊಂದಿರಬಹುದು. ಆದರೆ ಬ್ಯಾಂಕ್ ಉದ್ಯಮಿ ಚಂದಾ ಕೊಚ್ಚಾರ್ ಮುಖರ್ಜಿಯವರನ್ನು ಶ್ರೇಷ್ಠ ಆರ್ಥಿಕ ಇಂಜಿನಿಯರ್ ಎಂದು ಶ್ಲಾಘಿಸಿದ್ದಾರೆ. ಸರಕಾರದ ಸಾಲ ನೀತಿಗಳಿಂದ ಉದ್ಯಮಕ್ಕೆ ತೊಂದರೆಯಾಗದಂತೆ ನಿಭಾಯಿಸಿದ ರೀತಿಗೆ ಅವರು ಬೆರಗಾಗಿದ್ದಾರಂತೆ.
ಅವರು ಆರ್ಥಿಕತೆಯನ್ನು ನಿಭಾಯಿಸಿದ ರೀತಿಯಿಂದಾಗಿ ನಾವಿಲ್ಲಿ ಉಳಿದುಕೊಂಡಿದ್ದೇವೆ ಎಂಬುದು ನಾನು ಅವರಿಗೆ ನೀಡುವ ಶ್ಲಾಘನೆ ಎಂದು ಐಸಿಐಸಿಐ ಬ್ಯಾಂಕ್‌ನ ಪ್ರಧಾನ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಕೊಚ್ಚಾರ್ ತಿಳಿಸಿದ್ದಾರೆ.
ಕಳೆದ ಆರ್ಥಿಕ ವರ್ಷದಲ್ಲಿ 3.1 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮಾರುಕಟ್ಟೆಯಿಂದ ಪಡೆದುಕೊಂಡಿದ್ದ ಸರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ 4.5 ಲಕ್ಷ ಕೋಟಿ ರೂಪಾಯಿಗಳನ್ನು ಪಡೆಯಲು ನಿರ್ಧರಿಸಿದಾಗ, ಪಡೆದ ಸಾಲವನ್ನು ನಿಭಾಯಿಸುವ ಬಗ್ಗೆ ಉದ್ಯಮ ಆತಂಕ ವ್ಯಕ್ತಪಡಿಸಿತ್ತು.
ಸರಕಾರ ಪಡೆದುಕೊಳ್ಳುವ ಸಾಲದ ಮೊತ್ತ ಹೊರ ಬಂದಾಗ ನಾವು ನಿಜಕ್ಕೂ ಚಿಂತಾಕ್ರಾಂತರಾಗಿದ್ದೆವು. ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಬಗ್ಗೆ ನಮಗೆ ಸ್ಪಷ್ಟತೆಯ ಅಗತ್ಯವಿತ್ತು. ಆದರೆ ಅದು ಶೀಘ್ರದಲ್ಲೇ ನಮ್ಮೆದುರು ಪುರಾವೆ ಸಮೇತ ರುಜುವಾತಾಯಿತು ಎಂದು ಕೊಚ್ಚಾರ್ ವಿವರಿಸಿದರು.
ಸರಕಾರವು ಪಡೆದಿದ್ದ ಸಾಲದಲ್ಲಿ ಶೇ.70ರಷ್ಟನ್ನು ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದೊಳಗೆ ತೀರಿಸಲಾಗುತ್ತದೆ. ಉಳಿದ ಅರ್ಧ ವರ್ಷವನ್ನು ಉದ್ಯಮದ ಸಾಲಕ್ಕಾಗಿ ಮೀಸಲಿಡಲಾಗುತ್ತಿದೆ.
ಅದೇ ಹೊತ್ತಿಗೆ ಸರಕಾರದ ಸಾಲವು ನಿಜಕ್ಕೂ ದೊಡ್ಡ ಮೊತ್ತದ್ದು ಎಂಬುದನ್ನು ಒಪ್ಪಿಕೊಂಡ ಅವರು, ಇದರಿಂದಾಗಿ ಆರ್ಥಿಕ ವ್ಯವಸ್ಥೆಯ ಮೇಲೆ ಮತ್ತು ಬಡ್ಡಿದರದ ಮೇಲೆ ಪರಿಣಾಮ ಬೀರಲಿದೆ ಎಂದರು. ಇದರ ಹಿಂದೆ ಹಲವು ಚಿಂತನೆಗಳು ಅಡಗಿವೆ. ಬಹುತೇಕ ಶೇ.70ರಷ್ಟನ್ನು ಮೊದಲಾರ್ಧದ ಅವಧಿಯಲ್ಲಿ ತುಂಬಿಸಲಾಗುತ್ತಿದೆ ಎಂದು ಕೊಚ್ಚಾರ್ ತಿಳಿಸಿದ್ದಾರೆ.