ದೇಶದಲ್ಲಿರುವ 67 ಇಂಜಿನಿಯರಿಂಗ್/ಟೆಕ್ನಾಲಜಿ ಇನ್ಸ್‌ಟಿಟ್ಯೂಟ್‌ಗಳಲ್ಲಿ ಐಐಎಸ್‌ಸಿ ಮತ್ತೊಮ್ಮೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. 'ಕರೆಂಟ್ ಸೈನ್ಸ್' ಪ್ರಕಟಿಸಿರುವ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಐಐಟಿ-ಕಾನ್ಪುರ, ಮೂರನೇ ಸ್ಥಾನ ಐಐಟಿ-ಬಾಂಬೆ, ನಾಲ್ಕನೇ ಸ್ಥಾನ ಐಐಟಿ-ಖರ್ಗಾಪುರ್ ಮತ್ತು ಐದನೇ ಸ್ಥಾನ ಐಐಟಿ-ದೆಹಲಿ ಪಾಲಾಗಿದೆ.
'ಕರೆಂಟ್ ಸೈನ್ಸ್' ವಿಜ್ಞಾನ ಮ್ಯಾಗಜಿನ್‌ಗಾಗಿ ವೈಜ್ಞಾನಿಕ ಸಂವಹನ ಮತ್ತು ಮಾಹಿತಿ ಸಂಪನ್ಮೂಲಗಳ ರಾಷ್ಟ್ರೀಯ ಸಂಸ್ಥೆ ಹಾಗೂ ರಾಷ್ಟ್ರೀಯ ವಿಜ್ಞಾನ ಸಂಸ್ಥೆ, ತಂತ್ರಜ್ಞಾನ ಮತ್ತು ಅಭಿವೃದ್ಧಿ ಅಧ್ಯಯನ, ನವದೆಹಲಿ ಸಂಸ್ಥೆಗಳ ಪರಿಣತರಾದ ಗಂಗನ್ ಪ್ರತಾಪ್ ಮತ್ತು ಬಿ.ಎಂ. ಗುಪ್ತಾ ಈ ರ‌್ಯಾಂಕಿಂಗ್ ಪ್ರಕಟಿಸಿದ್ದಾರೆ.
ಜಾದವ್‌ಪುರ್ ಯುನಿವರ್ಸಿಟಿ, ಐಐಟಿ-ಮದ್ರಾಸು, ಐಐಟಿ ರೂರ್ಕೀ, ಅನ್ನಾ ಯುನಿವರ್ಸಿಟಿ ಮತ್ತು ಐಐಟಿ-ಗುವಾಹತಿ ಅಗ್ರ 10ರೊಳಗೆ ಸ್ಥಾನ ಪಡೆದಿರುವ ಇನ್ನಿತರ ವಿದ್ಯಾ ಸಂಸ್ಥೆಗಳು.
1999ರಿಂದ 2008ರ ನಡುವಿನ ಪ್ರಕಟಣೆ, ಉಲ್ಲೇಖಗಳು ಮತ್ತು ಅಧ್ಯಯನ ದಾಖಲೆಗಳನ್ನಾಧರಿಸಿ ಸಂಸ್ಥೆಗಳಿಗೆ ರ‌್ಯಾಂಕ್ ನೀಡಲಾಗಿದೆ. ಇದರ ವರದಿಯ ಪ್ರಕಾರ ದೇಶದಲ್ಲಿಯೇ ಐಐಎಸ್‌ಸಿ ಅಗ್ರ ಸಂಸ್ಥೆಯಾಗಿ ಮೂಡಿ ಬಂದಿದೆ.
ದೇಶದ ಯುನಿವರ್ಸಿಟಿ ವಲಯಕ್ಕೆ ಹೋಲಿಸಿದಾಗ ಇಂಜಿನಿಯರಿಂಗ್ ಸಂಸ್ಥೆಗಳು ಅತ್ಯುತ್ತಮ ಸಾಧನೆ ಮೆರೆದಿವೆ. ಕಳೆದ 10 ವರ್ಷಗಳಲ್ಲಿ 67 ಇಂಜಿನಿಯರಿಂಗ್ ಸಂಸ್ಥೆಗಳು 59,685 ಅಧ್ಯಯನ ವರದಿಗಳನ್ನು ನೀಡಿದ್ದರೆ, ಯುನಿವರ್ಸಿಟಿಗಳು ನೀಡಿರುವುದು 75,166 ಮಾತ್ರ.
ಐಐಎಸ್‌ಸಿ 13,000, ಐಐಟಿ ಖರ್ಗಾಪುರ್ 7,300, ಐಐಟಿ ಬಾಂಬೆ 7228, ಐಐಟಿ ದೆಹಲಿ 6520, ಐಐಟಿ ಕಾನ್ಪುರ 6234, ಐಐಟಿ ಮದ್ರಾಸು 5715, ಐಐಟಿ ರೂರ್ಕೀ 3471ರಷ್ಟು ಅಧ್ಯಯನ ವರದಿಗಳನ್ನು ನೀಡಿವೆ ಎಂದು ಮ್ಯಾಗಜಿನ್ ತನ್ನ ವರದಿಯಲ್ಲಿ ತಿಳಿಸಿದೆ.