ಆರ್ಥಿಕ ಸಂಕಷ್ಟದಿಂದ ತೊಳಲಾಡುತ್ತಿರುವ ಏರ್ ಇಂಡಿಯಾ, ಉದ್ಯೋಗಿಗಳಿಗೆ ವೇತನ ವಿಳಂಬ ಮಾಡಿರುವ ವಿರುದ್ಧ 20,000ಕ್ಕೂ ಹೆಚ್ಚು ನೌಕರರನ್ನು ಹೊಂದಿರುವ ವಿಮಾನಯಾನ ಸಂಸ್ಥೆಯ ನೌಕರರ ಒಕ್ಕೂಟಗಳು ಮಂಗಳವಾರದಿಂದ ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಆರಂಭಿಸುವ ನಿರ್ಧಾರಕ್ಕೆ ಬಂದಿದೆ.
ನಮ್ಮ ವೇತನದ ಬಗ್ಗೆ ಆಡಳಿತ ಮಂಡಳಿಯು ಕಠಿಣ ನಿಲುವು ತಳೆದಿರುವುದರಿಂದ 20,000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ವೈಮಾನಿಕ ಉದ್ಯಮದ ನೌಕರರ ಸಂಘಟನೆ (ಎಐಇಜಿ) ಮತ್ತು ಏರ್ ಕಾರ್ಪೊರೇಷನ್ ಉದ್ಯೋಗಿಗಳ ಒಕ್ಕೂಟ (ಎಸಿಇಯು) ಮತ್ತು ಇತರ ನೌಕರರ ಒಕ್ಕೂಟಗಳು ದೇಶದಾದ್ಯಂತ ಇಂದಿನಿಂದ ಮೂರು ದಿನಗಳ ಉಪವಾಸ ಸತ್ಯಾಗ್ರಹ ನಡೆಸುವ ನಿರ್ಧಾರಕ್ಕೆ ಬಂದಿವೆ ಎಂದು ಎಸಿಇಯು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜೆ.ಬಿ. ಕಡಿಯನ್ ತಿಳಿಸಿದ್ದಾರೆ.
ತಮ್ಮ ಬೇಡಿಕೆಗಳು ಈಡೇರದಿದ್ದರೆ ಆಗಸ್ಟ್ 31ರಂದು ಮತ್ತೆ ಮುಷ್ಕರ ಹೂಡುವ ಬೆದರಿಕೆಯನ್ನೂ ಉದ್ಯೋಗಿಗಳು ಹಾಕಿದ್ದಾರೆ.
ಕಳೆದೆರಡು ತಿಂಗಳುಗಳಿಂದ ನಾವು ವಿಮಾನಯಾನ ಸಂಸ್ಥೆಯ ಉದ್ಧಾರಕ್ಕಾಗಿ ಅವಿರತ ಶ್ರಮವಹಿಸುತ್ತಿದ್ದೇವೆ. ಆದರೆ ಆಡಳಿತ ಮಂಡಳಿಯು ನಮ್ಮ ವೇತನದಲ್ಲಿನ ಶೇ.50ನ್ನು ತಡೆ ಹಿಡಿದಿದೆ. ಇದು ನಮಗೆ ಸರ್ವಸಮ್ಮತವಾಗಿಲ್ಲ ಎಂದು ಕಡಿಯನ್ ತಿಳಿಸಿದ್ದಾರೆ.
ವೇತನ ಪಡೆಯುವುದು ನಮ್ಮ ಹಕ್ಕು ಮತ್ತು ಪಾವತಿಸುವುದು ಸರಕಾರದ ಕರ್ತವ್ಯ. ವೇತನ ಕಡಿತ ಮಾಡುವ ಬಗ್ಗೆ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರಾಗಲೀ ಅಥವಾ ಯಾವುದೇ ಸಚಿವರಾಗಲೀ ಏಕಾಏಕಿ ನಿರ್ಧಾರ ಕೈಗೊಳ್ಳಲಾಗದು ಎಂದು ಅವರು ಬೊಟ್ಟು ಮಾಡಿದರು.
ಮುಷ್ಕರದ ಕಾರಣದಿಂದಾಗಿ ದೇಶದಲ್ಲಿನ ಕೆಲವು ವಿಮಾನ ನಿಲ್ದಾಣಗಳ ವೈಮಾನಿಕ ಸೇವೆಯು ವ್ಯತ್ಯಯವುಂಟಾಗುವ ಸಾಧ್ಯತೆಗಳಿವೆ. ಈ ಹಿಂದೆ ಜುಲೈಯಲ್ಲ ವೇತನ ನೀಡದ್ದಕ್ಕೆ ನೌಕರರು, ಎರಡು ಗಂಟೆಗಳ ಮುಷ್ಕರ ನಡೆಸಿ ಆಡಳಿತ ಮಂಡಳಿಯ ಗಮನ ಸೆಳೆದಿದ್ದರು.
ಏರ್ ಇಂಡಿಯಾ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರು ಮತ್ತು ನೌಕರರ ಒಕ್ಕೂಟಗಳ ನಡುವೆ ಮುಂಬೈಯಲ್ಲಿ ಶುಕ್ರವಾರ ನಡೆದಿದ್ದ ಮಾತುಕತೆಯು ವಿಫಲವಾಗಿದ್ದು, ಇಂದು ಅಪರಾಹ್ನ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.