ಹಣಕಾಸು ಸಂಕಷ್ಟದಿಂದ ಬಳಲುತ್ತಿರುವ ಜಪಾನ್ ವಿಮಾನಯಾನ ಸಂಸ್ಥೆ 'ಜೆಎಎಲ್', 2012ರೊಳಗೆ ತನ್ನ ನೌಕರರ ಸಂಖ್ಯೆಯನ್ನು ಶೇ.10ರಷ್ಟು ಇಳಿಸಲಿದ್ದು, 5,000ಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಾಗಲಿದ್ದರೆ ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ.
ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಜಪಾನ್ ಏರ್‌ಲೈನ್ಸ್ ಕಾರ್ಪೊರೇಷನ್ 5,000 ಉದ್ಯೋಗ ಕಡಿತಗೊಳಿಸುವ ಮೂಲಕ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಲಿದೆ.
ಅದಕ್ಕಾಗಿ ಪರಿಹಾರ ಮತ್ತು ಅವಧಿಗಿಂತ ಮೊದಲೇ ನಿವೃತ್ತಿ ಪಡೆಯುವ ಸೌಲಭ್ಯಗಳನ್ನು ನೌಕರರಿಗೆ ನೀಡುವ ಮೂಲಕ 2012ರ ವೇಳೆಗೆ 1.6 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಖರ್ಚುಗಳನ್ನು ಕಡಿಮೆ ಮಾಡುವ ಯೋಜನೆಯನ್ನು ವಿಮಾನಯಾನ ಸಂಸ್ಥೆ ರೂಪಿಸಿದೆ.
ಬೃಹತ್ ಸಂಸ್ಥೆ ಜೆಎಎಲ್ 48,900 ಉದ್ಯೋಗಿಗಳನ್ನು ಹೊಂದಿದ್ದು, ಪ್ರಸಕ್ತ ಕೈಗೊಂಡಿರುವ ನಿರ್ಧಾರಕ್ಕೆ ಭಾರೀ ಪ್ರತಿಭಟನೆಗಳು ವ್ಯಕ್ತವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ತಕ್ಕ ಕ್ರಮಗಳನ್ನು ಪೂರ್ವಭಾವಿಯಾಗಿ ಸಂಸ್ಥೆ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಜೆಎಎಲ್ ಸಮೂಹವು ನಿರೀಕ್ಷೆಗಿಂತಲೂ ಹೆಚ್ಚಿನ ನಷ್ಟವನ್ನು (99.04 ಬಿಲಿಯನ್ ಯೆನ್) ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಯಲ್ಲಿ ಅನುಭವಿಸಿತ್ತು. ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲಾಗುತ್ತಿದ್ದರೂ, ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಎಚ್1ಎನ್1 ಭೀತಿಯಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖಾವಾಗಿರುವ ಕಾರಣ ವಿಮಾನಯಾನ ಸಂಸ್ಥೆಯು ಭಾರೀ ನಷ್ಟ ಅನುಭವಿಸುತ್ತಿದೆ.