ವಿಶ್ವದ ಅಗ್ಗದ ಕಾರು ಎಂದೇ ಖ್ಯಾತಿವೆತ್ತಿರುವ ನ್ಯಾನೋ ತನ್ನ ಗುಜರಾತ್ ಘಟಕದಲ್ಲಿ ಮುಂದಿನ ವರ್ಷದ ಜನವರಿಯೊಳಗೆ ಉತ್ಪಾದನೆ ಆರಂಭಿಸಲಿದೆ ಎಂದು ಟಾಟಾ ಮೋಟಾರ್ಸ್ ಮುಖ್ಯಸ್ಥ ರತನ್ ಟಾಟಾ ತಿಳಿಸಿದ್ದಾರೆ.
ಗುಜರಾತ್‌ನಲ್ಲಿನ ಸನಂದ್ ಘಟಕವು ಜನವರಿಯೊಳಗೆ ಕಾರ್ಯಾರಂಭ ಮಾಡಲಿದೆ. ಮಾರುಕಟ್ಟೆಯಲ್ಲಿ ಹಳದಿ ಮತ್ತು ಸಿಲ್ವರ್ ಬಣ್ಣದ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿರುವ ಕಾರಣ ಈ ಘಟಕವು ಆರಂಭದಲ್ಲಿ ಇದೇ ಕಾರುಗಳನ್ನು ಉತ್ಪಾದಿಸಲಿದೆ ಎಂದು ಕಂಪನಿಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡುತ್ತಾ ಅಧ್ಯಕ್ಷ ಟಾಟಾ ತಿಳಿಸಿದ್ದಾರೆ.
ಪ್ರಸಕ್ತ ಕಂಪನಿಯು ಉತ್ತಾರಂಚಲದ ಪಂತ್‌ನಗರ್‌ನಲ್ಲಿ ನ್ಯಾನೋ ಘಟಕವನ್ನು ಹೊಂದಿದ್ದು ಅಲ್ಲಿ ಒಂದು ಲಕ್ಷ ಕಾರುಗಳನ್ನು ಉತ್ಪಾದಿಸಲಾಗುತ್ತಿದೆ. ಆ ಘಟಕಕ್ಕೆ ಸನಂದ್ ಪೂರಕವಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ನುಡಿದರು.
ಕಳೆದ ವರ್ಷ ಪಶ್ಚಿಮ ಬಂಗಾಲದ ಸಿಂಗೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ನ್ಯಾನೋ ಘಟಕವನ್ನು ಪ್ರತಿಭಟನೆ-ರಾಜಕೀಯದ ಕಾರಣದಿಂದ ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿತ್ತು.
ಈ ಸ್ಥಳಾಂತರದಿಂದ ಕಂಪನಿಗೆ 100 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ. ಇದರಿಂದಾಗಿರುವ ಒಟ್ಟು ನಷ್ಟವನ್ನು ಇದುವರೆಗೂ ಲೆಕ್ಕ ಹಾಕಲಾಗಿಲ್ಲ ಎಂದು ಟಾಟಾ ತಿಳಿಸಿದ್ದಾರೆ.
ಜಗತ್ತಿನಲ್ಲೇ ಅತೀ ಕಡಿಮೆ ಬೆಲೆಯ ಕಾರು ಎಂದು ಹೇಳಲಾಗುತ್ತಿರುವ ನ್ಯಾನೋ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯನ್ನು ಮಾತ್ರ ಪ್ರವೇಶಿಸಿತ್ತು. ಆದರೆ ಮುಂದಿನ ದಿನಗಳಲ್ಲಿ ಯೂರೋಪ್, ಆಫ್ರಿಕಾ ಮತ್ತು ಏಷಿಯಾ ಮಾರುಕಟ್ಟೆಗಳಿಗೆ ಕಾರುಗಳನ್ನು ರಫ್ತು ಮಾಡುವ ಉದ್ದೇಶವಿದೆ ಎಂದು ಅವರು ಹೇಳಿದರು.