ರಾಜ್ಯಕ್ಕೆ ಈ ವರ್ಷ ಮಿಶ್ರಫಲ. ಒಂದು ಕಡೆ ಭಾರೀ ಮಳೆಯಿಂದ ಬೆಳೆ ನಷ್ಟವಾಗುತ್ತಿದ್ದರೆ, ಮತ್ತೊಂದೆಡೆ ಮಳೆಯೇ ಇಲ್ಲದೆ ಬಿತ್ತನೆ ಕಾರ್ಯ ಸ್ಥಗಿತಗೊಂಡು ನಷ್ಟವಾಗಿದೆ. ಪರಿಣಾಮ 1387 ಕೋಟಿ ರೂಪಾಯಿಗಳಷ್ಟು ನಷ್ಟ.
ಪ್ರಸಕ್ತ ವರ್ಷದಲ್ಲಿ ಕರ್ನಾಟಕದ ಹಲವು ಜಿಲ್ಲೆಗಳು ಮಳೆಯನ್ನೇ ಕಾಣದೆ ಅನಾವೃಷ್ಟಿಗೊಳಗಾಗಿವೆ. ಇದರಿಂದಾಗಿ 871 ಕೋಟಿ ರೂಪಾಯಿ ನಷ್ಟವಾಗಿದೆ. ಅತಿವೃಷ್ಟಿಗೊಳಗಾದ ಕೆಲವು ಜಿಲ್ಲೆಗಳಲ್ಲಿ ಬೆಳೆ ಹಾನಿಗೀಡಾಗಿದೆ. ಇದರ ಮೊತ್ತ 516 ಕೋಟಿ ರೂಪಾಯಿಗಳು ಎಂದು ಸರಕಾರ ತಿಳಿಸಿದೆ.
ರಾಜ್ಯದಲ್ಲಿ ಭತ್ತ, ಜೋಳ, ಮೆಕ್ಕೆಜೋಳ ಸೇರಿದಂತೆ ಆಹಾರ ಧಾನ್ಯಗಳ ಬೆಳೆಗೆ ಇದರಿಂದಾಗಿ ತೀವ್ರ ಹಾನಿಯುಂಟಾಗಿದ್ದು, ಬಿತ್ತನೆ ಕಾರ್ಯವೂ ಬಹುತೇಕ ಸ್ಥಗಿತಗೊಂಡಿದೆ ಅಥವಾ ಕೆಲವೆಡೆ ಹಾನಿಗೀಡಾಗಿದೆ.
ಭತ್ತ ಬೆಳೆಯುವ ಗುರಿಯನ್ನು ತಲುಪುವಲ್ಲಿ ರಾಜ್ಯವು ಭಾರೀ ಕುಸಿತ ಕಂಡಿದೆ. 10.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಿದ್ದ ರಾಜ್ಯ ಇದುವರೆಗೆ ಕೇವಲ 7.05 ಲಕ್ಷ ಹೆಕ್ಟೇರ್‌ಗಳಲ್ಲಿ ಮಾತ್ರ ಬಿತ್ತನೆ ಕಂಡಿದೆ.
ಒಟ್ಟು ಅಂಕಿ-ಅಂಶಗಳ ಪ್ರಕಾರ ಅತಿವೃಷ್ಟಿಗಿಂತ ಅನಾವೃಷ್ಟಿಯ ನಷ್ಟವೇ ಹೆಚ್ಚು. ಬರ ಪರಿಸ್ಥಿತಿಯಿಂದಾಗಿ 16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದರೆ, ಅತೀ ಹೆಚ್ಚಿನ ಮಳೆಯ ಕಾರಣ 1.74 ಲಕ್ಷ ಪ್ರದೇಶ ತೊಂದರೆಗೀಡಾಗಿದೆ. 23,000 ಹೆಕ್ಟೇರ್ ಪ್ರದೇಶದಲ್ಲಿ ತೋಟದ ಬೆಲೆ ಹಾಗೂ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಲೆ ಸಂಪೂರ್ಣ ಹಾನಿಗೀಡಾಗಿದೆ ಎಂದು ರಾಜ್ಯ ತಿಳಿಸಿದೆ.
ಕೇಂದ್ರ ಸರ್ಕಾರದ ತಂಡ ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಈಗಾಗಲೇ ಆಗಮಿಸಿದ್ದು ಸಮೀಕ್ಷೆ ನಡೆಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕೇಂದ್ರಕ್ಕೆ ವರದಿ ತಲುಪಲಿದೆ. ನಂತರ ಪರಿಹಾರ ಸಿಗುವ ನಿರೀಕ್ಷೆಗಳಿವೆ ಎಂದು ರಾಜ್ಯ ಸರಕಾರದ ಕೃಷಿ ಮತ್ತು ತೋಟಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.