ಬಳಕೆದಾರರು ವೈಯಕ್ತಿಕವಾಗಿ ನೀಡುವ ತಪ್ಪು ಮಾಹಿತಿಗಳಿಗೆ ನಿರ್ಬಂಧ ಹೇರಲು ಆನ್‌ಲೈನ್ ವಿಶ್ವಕೋಶ 'ವಿಕಿಪೀಡಿಯಾ' ನಿರ್ಧರಿಸಿದ್ದು, ನೂತನ ವಿಧಾನವೊಂದನ್ನು ಅನುಸರಿಸಲಿದೆ.
ಪ್ರಸಕ್ತ ವಿಕಿಪೀಡಿಯಾ ಹೊಂದಿರುವ ಆನ್‌ಲೈನ್ ವಿಶ್ವಕೋಶಕ್ಕೆ ಯಾರು ಬೇಕಾದರೂ ಲೇಖನಗಳನ್ನು ಸೇರಿಸುವುದು, ಮನಬಂದಂತೆ ಬದಲಾವಣೆಗಳನ್ನು ಮಾಡುವುದು ಸಾಧ್ಯವಿದೆ. ಇಲ್ಲಿ ಹಲವು ದುರುಪಯೋಗಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಕೆಲವೊಂದು ನಿರ್ಬಂಧಗಳನ್ನು ಹೇರುವ ನಿರ್ಧಾರ ವಿಕಿಪೀಡಿಯಾದ್ದು.
PR
ವಿಕಿಪೀಡಿಯಾ ಇಂಗ್ಲೀಷ್ ಬಳಕೆದಾರರು ಪೋಸ್ಟ್ ಮಾಡಿದ ಲೇಖನಗಳು ಅಥವಾ ಮಾಡಿದ ಬದಲಾವಣೆಗಳನ್ನು ತಕ್ಷಣ ಆನ್‌ಲೈನ್‌ನಲ್ಲಿ ಬಿಂಬಿಸುವ ಮೊದಲು ಪರಿಶೀಲನೆಗೊಳಪಡಿಸುವ ಮೂಲಕ ಸತ್ಯಾಸತ್ಯತೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶ ವಿಶ್ವಕೋಶದ್ದು. ವಿಕಿಪೀಡಿಯಾ ಸಂಪಾದಕರು ಒಪ್ಪಿಗೆ ನೀಡಿದ ನಂತರವಷ್ಟೇ ಯಾವುದೇ ಲೇಖನಗಳು ಅಥವಾ ಎಡಿಟ್‌ಗಳು ವಿಕಿಪೀಡಿಯಾ ಪುಟಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ.
ವಿಕಿಪೀಡಿಯಾದ ಈ ಕ್ರಮದಿಂದಾಗಿ ಜನಪ್ರಿಯ ವ್ಯಕ್ತಿಗಳ ಬಗ್ಗೆ ಹರಡಲಾಗುವ ಗಾಸಿಪ್, ಸುಳ್ಳು ಸುದ್ದಿಗಳು ಮತ್ತಿತರ ಆರೋಪ ಪೂರಿತ ಲೇಖನಗಳು ಪ್ರಕಟವಾಗದು ಎಂದು ನಿರೀಕ್ಷಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹಲವು ಜನಪ್ರಿಯ ವ್ಯಕ್ತಿಗಳು ಬದುಕಿರುವಾಗಲೇ ಸತ್ತಿದ್ದಾರೆ ಎಂಬ ವರದಿಗಳು ವಿಕಿಪೀಡಿಯಾದಲ್ಲಿ ಕಾಣಿಸಿಕೊಂಡು ವಿವಾದ ಉಂಟಾಗಿತ್ತು. ಇಂತಹ ಪ್ರಕರಣಗಳನ್ನು ತಡೆದು ವಿಕಿಪೀಡಿಯಾವನ್ನು ಉಪಯೋಗಕಾರಿ ಎಂದೆನಿಸುವ ಉದ್ದೇಶ ಸಂಸ್ಥೆಯದ್ದು.
ಪ್ರಸಕ್ತ ಈ ನಿರ್ಬಂಧವನ್ನು ಪರೀಕ್ಷಾರ್ಥವಾಗಿ ಆರಂಭಿಸಲಾಗಿದ್ದು, ಬಳಕೆದಾರರು ಅತ್ಯುತ್ತಮವಾಗಿ ಸ್ಪಂದಿಸಿದರೆ ಕೆಲವೇ ವಾರಗಳಲ್ಲಿ ಬದುಕಿರುವ ಎಲ್ಲಾ ವ್ಯಕ್ತಿಗಳ ಕುರಿತಾಗಿರುವ ಲೇಖನಗಳಿಗೆ ಇದೇ ನಿರ್ಬಂಧವನ್ನು ಹಾಕಲಾಗುತ್ತದೆ. ತದನಂತರದ ಹೆಜ್ಜೆ ಪ್ರಸಕ್ತ ಚಾಲ್ತಿಯಲ್ಲಿರುವ ಸಂಸ್ಥೆಗಳದ್ದು. ಅಲ್ಲೂ ಇದೇ ವಿಧಾನವನ್ನು ಅಳವಡಿಸಲಾಗುತ್ತದೆ. ಆಗ ಹೆಚ್ಚು ನಂಬಲರ್ಹ ಮಾಹಿತಿಗಳನ್ನು ಒದಗಿಸುವ ಬಗ್ಗೆ ಖಚಿತತೆ ಹೆಚ್ಚುತ್ತದೆ ಎನ್ನುವುದು ವಿಕಿಪೀಡಿಯಾ ಅಭಿಪ್ರಾಯ.
ಇದಕ್ಕೆ ಈಗಾಗಲೇ ಹಲವು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಸಮಯ ಮತ್ತು ಕೆಲಸ ವ್ಯರ್ಥ ಎಂಬುದು ಅವರ ಅನಿಸಿಕೆ. ಆದರೂ ಶೇ.80ಕ್ಕೂ ಹೆಚ್ಚು ಮಂದಿ ವಿಕಿಪೀಡಿಯಾದ ನಿರ್ಧಾರವನ್ನು ಸ್ವಾಗತಿಸಿದ್ದಾರಂತೆ.