ದಶಕಗಳ ನಂತರ ದೆಹಲಿ ಜನಸಂಖ್ಯಾ ಅನುಪಾತದಲ್ಲಿ ಧನಾತ್ಮಕ ಬೆಳವಣಿಗೆ ಸಾಧಿಸಿದೆ. 2005ರಲ್ಲಿ 822ರಲ್ಲಿದ್ದ ಹೆಣ್ಣು ಮಕ್ಕಳ ಜನನ ಅನುಪಾತವು 2008ರ ಅವಧಿಗೆ 1,004ಕ್ಕೆ ತಲುಪಿದೆ ಎಂದು ಸರಕಾರ ತಿಳಿಸಿದೆ.
ವರದಿಯ ಪ್ರಕಾರ ಒಂದು ವರ್ಷದ ಹಿಂದೆ ಅಂದರೆ 2008ರಲ್ಲಿ ದೆಹಲಿಯಲ್ಲಿ ಸರಿಸುಮಾರು 19,000ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಜನಿಸಿದ್ದಾರೆ. ಹೀಗಾಗಿ ಜನಸಂಖ್ಯೆಯ ಅನುಪಾತದಲ್ಲಿದ್ದ ವ್ಯತ್ಯಾಸವು ಪ್ರಸಕ್ತ ಧನಾತ್ಮಕ ವಲಯಕ್ಕೆ ವರ್ಗಾವಣೆಗೊಂಡಿದೆ.
ಇದರ ಕೀರ್ತಿಯನ್ನೂ ರಾಜ್ಯ ಸರಕಾರಕ್ಕೇ ನೀಡಲಾಗಿದೆ. ಹೆಣ್ಣು ಮಗುವಿನ ಶಿಕ್ಷಣಕ್ಕಾಗಿ ಹೆತ್ತವರಿಗೆ ಭತ್ಯೆಯನ್ನು ನೀಡುವ 'ಲಾಡ್ಲಿ' ಯೋಜನೆಯನ್ನು ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಜಾರಿಗೆ ತಂದಿದ್ದರು.
ಈ ಯೋಜನೆಯ ಪ್ರಕಾರ ಒಂದನೇ ತರಗತಿ, ಆರು, ಒಂಬತ್ತು, 10 ಮತ್ತು 12ನೇ ತರಗತಿಗಳಿಗೆ ಹೆಣ್ಣು ಮಕ್ಕಳು ಪ್ರವೇಶ ಪಡೆದಾಗ ಸರಕಾರವು ಪ್ರತೀ ಬಾರಿಯೂ ಆ ಹೆಣ್ಣು ಮಗುವಿನ ಖಾತೆಗೆ ತಲಾ ಐದು ಸಾವಿರ ರೂಪಾಯಿಗಳಂತೆ ಠೇವಣಿ ಇಡುತ್ತಾ ಬರುತ್ತದೆ. ಈ ಹಣವನ್ನು ಬಡ್ಡಿ ಸಮೇತ ಆಕೆ 18 ವರ್ಷ ತುಂಬಿದಾಗ ಪಡೆದುಕೊಳ್ಳಬಹುದಾಗಿದೆ.
2008ರ ದೆಹಲಿಯಲ್ಲಿನ ಜನನ ಮತ್ತು ಮರಣದ ವಾರ್ಷಿಕ ವರದಿಯನ್ನು ದೆಹಲಿ ಹಣಕಾಸು ಮಂತ್ರಿ ಎ.ಕೆ. ವಾಲಿಯಾ ಬಿಡುಗಡೆ ಮಾಡಿದರು.
2007ರಲ್ಲಿ ದೆಹಲಿಯಲ್ಲಿ 1.48 ಲಕ್ಷ ಹೆಣ್ಣು ಮಕ್ಕಳು ಹುಟ್ಟಿದ್ದರು. ಇದು 2008ರ ಅವಧಿಗೆ 1.67 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಈ ವರದಿ ವಿವರಣೆ ನೀಡಿದೆ.
2008ರ ಅವಧಿಯಲ್ಲಿ ದೆಹಲಿಯಲ್ಲಿ ಒಟ್ಟಾರೆ 3.34 ಮಕ್ಕಳ ಜನನವಾಗಿದ್ದು, ಅದರಲ್ಲಿ 1,66,583 ಗಂಡು ಮಕ್ಕಳು (ಶೇ.49.89), ಹಾಗೂ 1,67,325 ಹೆಣ್ಣು ಮಕ್ಕಳು (ಶೇ.50.11) ಎಂದು ವರದಿ ತಿಳಿಸಿದೆ.