ಲಾಸ್ ಏಂಜಲೀಸ್: ವೆಬ್‌ಸೈಟಿನಲ್ಲಿ ಕಪ್ಪು ಜನಾಂಗದ ವ್ಯಕ್ತಿಯೊಬ್ಬನ ಮುಖವನ್ನು ಬಿಳಿಯನ ಮುಖದೊಂದಿಗೆ ಬದಲಾಯಿಸಿ ಜಾಹಿರಾತು ಪ್ರಕಟಿಸುವ ಮೂಲಕ ಜನಾಂಗೀಯ ನಿಂದನೆ ಮಾಡಲಾಗಿದೆ ಎಂಬ ಆರೋಪಗಳಿಗೆ ಬೆಚ್ಚಿಬಿದ್ದ ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ ಕ್ಷಮೆ ಯಾಚಿಸಿದೆ.
PR
ಸೀಟಲ್ ಮೂಲದ ಮೈಕ್ರೋಸಾಫ್ಟ್ ಕಂಪನಿಯ ವೆಬ್‌ಸೈಟ್‌ನಲ್ಲಿ ಒಬ್ಬ ಏಷಿಯನ್, ಮತ್ತೊಬ್ಬ ಕರಿಯ ಜನಾಂಗದ ವ್ಯಕ್ತಿ ಹಾಗೂ ಬಿಳಿಯ ಮಹಿಳೆಯೊಬ್ಬರು ಕಾನ್ಫರೆನ್ಸ್ ಟೇಬಲ್‌ನ ಸುತ್ತ ಕುಳಿತಿದ್ದ ಚಿತ್ರ ಜಾಹಿರಾತಿನಲ್ಲಿ ಕಾಣಿಸಿಕೊಂಡಿತ್ತು.
ಆದರೆ ಇದೇ ಚಿತ್ರವನ್ನು ಮೈಕ್ರೋಸಾಫ್ಟ್ ತನ್ನ ಪೋಲೆಂಡ್ ಉದ್ಯಮ ವಿಭಾಗದ ವೆಬ್‌ಸೈಟ್‌ನಲ್ಲಿ ಕರಿಯ ಜನಾಂಗದ ವ್ಯಕ್ತಿಯ ಮುಖವನ್ನು ಬದಲಾಯಿಸಿತ್ತು. ಅಲ್ಲಿ ಕಪ್ಪು ಜನಾಂಗದ ಮುಖಕ್ಕೆ ಬಿಳಿಯನ ಮುಖವನ್ನು ಗ್ರಾಫಿಕ್ ಮುಖಾಂತರ ಬದಲು ಮಾಡಲಾಗಿತ್ತು. ಆದರೆ ಆತನ ಕೈಯನ್ನು ಬದಲಾಯಿಸಿರಲಿಲ್ಲ.
ಈ ಫೋಟೋ ಎಡಿಟಿಂಗ್ ಚಾಕಚಕ್ಯತೆಯು ಆನ್‌ಲೈನ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಯಿತು. ಪೋಲೆಂಡ್‌ನ ಜನಾಂಗೀಯ ಸಮಾನತೆ ಕುರಿತ ವಿಚಾರವೂ ಫೋಟೋ ಬದಲಾವಣೆಯಲ್ಲಿ ಪಾತ್ರವಹಿಸಿದೆ ಎಂದು ಕೆಲವು ಬ್ಲಾಗರುಗಳು ಅಭಿಪ್ರಾಯವ್ಯಕ್ತಪಡಿಸಿದರು.
ಈ ಬಗ್ಗೆ ನಾವು ಸವಿವರವಾದ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ಆ ಫೋಟೋವನ್ನು ತೆಗೆಯುವ ಕೆಲಸವನ್ನು ನಾವು ಆರಂಭಿಸಿದ್ದು, ಈ ಪ್ರಕರಣಕ್ಕಾಗಿ ಕ್ಷಮೆ ಯಾಚಿಸುತ್ತಿದ್ದೇವೆ ಎಂದು ಮೈಕ್ರೋಸಾಫ್ಟ್ ವಕ್ತಾರ ಲೂ ಗೆಲೋಸ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಕ್ಷಣವೇ ಕಾರ್ಯ ಪ್ರವೃತ್ತವಾಗಿರುವ ಮೈಕ್ರೋಸಾಫ್ಟ್ ಮೂಲ ಚಿತ್ರವನ್ನೇ ಜಾಹಿರಾತಿನಲ್ಲಿ ಉಳಿಸಿಕೊಂಡಿದ್ದು, ಬಿಳಿಯನ ಮುಖವನ್ನು ತೆಗೆದು ಹಾಕಿದೆ. ಆದರೂ ಬ್ಲಾಗರುಗಳು ತರೇವಾರಿ ಚರ್ಚೆಗಳಲ್ಲಿ ತೊಡಗಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.