ಎಡಿಎಫ್ ವಿಧಿಸುವುದು ವೈಮಾನಿಕ ಪ್ರಾಧಿಕಾರದ ಹಕ್ಕು: ಹೈಕೋರ್ಟ್
ನವದೆಹಲಿ, ಬುಧವಾರ, 26 ಆಗಸ್ಟ್ 2009( 17:24 IST )
ರಾಷ್ಟ್ರ ರಾಜಧಾನಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಿಧಿಸಲಾಗುವ ವಿಮಾನ ನಿಲ್ದಾಣ ಅಭಿವೃದ್ಧಿ ಶುಲ್ಕ (ಎಡಿಎಫ್)ವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ದೆಹಲಿ ಉಚ್ಛ ನ್ಯಾಯಾಲಯವು ಬುಧವಾರ ತಳ್ಳಿ ಹಾಕಿದೆ.
ಮುಖ್ಯ ನ್ಯಾಯಮೂರ್ತಿ ಅಜಿತ್ ಪ್ರಕಾಶ್ ಶಾ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನಿರಾಕರಿಸುತ್ತಾ, 'ವಿಮಾನ ನಿಲ್ದಾಣ ಅಭಿವೃದ್ಧಿ ಶುಲ್ಕ ವಿಧಿಸುತ್ತಿರುವುದರಲ್ಲಿ ಯಾವುದೇ ನಿಯಮ ಬಾಹಿರತೆಯಿರುವುದು ಕಂಡು ಬಂದಿಲ್ಲ. ಹಾಗಾಗಿ ಅರ್ಜಿಯನ್ನು ವಜಾ ಮಾಡಲಾಗಿದೆ' ಎಂದರು.
ಪ್ರಯಾಣಿಕರ ಅನುಕೂಲತೆಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಹಲವು ವ್ಯವಸ್ಥೆಗಳನ್ನು ರೂಪಿಸಿರುವುದರಿಂದ ವಿಮಾನ ನಿಲ್ದಾಣ ಅಭಿವೃದ್ಧಿ ಶುಲ್ಕ ವಿಧಿಸಲು ಅದು ಹಕ್ಕನ್ನು ಹೊಂದಿದೆ ಎಂದು ನ್ಯಾಯಾಲಯ ಹೇಳಿದೆ.
ಕಳೆದ ವಾರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ದೆಹಲಿ ಅಂತಾರಾಷ್ಟ್ರೀಯ ಪ್ರಾಧಿಕಾರ ಲಿಮಿಟೆಡ್ (ಡಿಐಎಎಲ್) ಮತ್ತು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಎಂಐಎಎಲ್)ನ ವಾದಗಳನ್ನು ಆಲಿಸಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಆದೇಶವನ್ನು ಕಾದಿರಿಸಿತ್ತು.
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುವ ದೇಶೀಯ ಪ್ರಯಾಣಿಕರಿಗೆ 200 ರೂಪಾಯಿ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಕ್ಕೆ 1,300 ರೂಪಾಯಿಗಳನ್ನು ವಿಮಾನ ನಿಲ್ದಾಣ ಅಭಿವೃದ್ಧಿ ಶುಲ್ಕವೆಂದು ಮಾರ್ಚ್ 1, 2009ರಿಂದ ವಸೂಲಿ ಮಾಡಲಾಗುತ್ತಿತ್ತು. ಇದರ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲಾಗಿತ್ತು.
ವಿಮಾನ ನಿಲ್ದಾಣ ಅಭಿವೃದ್ಧಿ ಶುಲ್ಕವನ್ನು ಪ್ರಯಾಣಿಕರ ಮೇಲೆ ವಿಧಿಸುವುದರಿಂದ ಸಾರ್ವಜನಿಕರ ಪ್ರಯಾಣವು ತೀರಾ ದುಬಾರಿಯಾಗುತ್ತಿದೆ. ಅಲ್ಲದೆ ಡಿಐಎಎಲ್ ಯಾವುದೇ ಸೌಲಭ್ಯಗಳನ್ನು ಕೂಡ ಪ್ರಯಾಣಿಕರಿಗೆ ನೀಡುತ್ತಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ದೆಹಲಿಯಿಂದ ಹಾರಾಟ ನಡೆಸುವ ಎಲ್ಲಾ ವಿಮಾನಯಾನ ಸಂಸ್ಥೆಗಳು ಟಿಕೆಟ್ ಹಣದ ಜತೆಗೆ ಪ್ರಯಾಣಿಕರಿಗೆ ಅಭಿವೃದ್ಧಿ ಶುಲ್ಕವನ್ನು ಕೂಡ ವಿಧಿಸುವಂತೆ ಮಾರ್ಚ್‌ನಲ್ಲಿ ಸರಕಾರವು ಆದೇಶ ನೀಡಿತ್ತು.