ಆಹಾರ ವಸ್ತುಗಳ ಬೆಲೆಯೇರಿಕೆಯ ಬೆಂಬಲ ಪಡೆದುಕೊಂಡ ಹಣದುಬ್ಬರ ದರವು ಕಳೆದ ವಾರದಲ್ಲಿದ್ದ ಶೇ.(-)1.53ರಿಂದ ಆಗಸ್ಟ್ 15ಕ್ಕೆ ಕೊನೆಗೊಂಡ ವಾರದಲ್ಲಿ ಶೇ.(-)0.95ಕ್ಕೆ ಏರಿಕೆ ಕಂಡಿದೆ.
ಮಳೆಯ ಕೊರತೆಯಿಂದಾಗಿ ಸಕ್ಕರೆ, ಹಾಲು, ಹಣ್ಣು-ಹಂಪಲು ಮತ್ತು ತರಕಾರಿ ಸೇರಿದಂತೆ ಆಹಾರ ವಸ್ತುಗಳ ಬೆಲೆ ಹೆಚ್ಚಳ ಕಂಡಿದ್ದ ಪರಿಣಾಮ ಹಣದುಬ್ಬರ ದರ ಶೇ.0.58ರ ಏರಿಕೆ ದಾಖಲಿಸಿದೆ.
ಇದರೊಂದಿಗೆ ಜೂನ್ 6ರಂದು ಆರಂಭವಾಗಿದ್ದ ಸಗಟು ಸೂಚ್ಯಂಕ ದರದ ಋಣಾತ್ಮಕ ಚಲನೆಯು ಸತತ 11ನೇ ವಾರವೂ ಮುಂದುವರಿದಂತಾಗಿದೆ. ಪ್ರಸಕ್ತ ಅವಧಿಯ ಕಳೆದ ವರ್ಷ ಹಣದುಬ್ಬರ ದರ ಶೇ.12.82ರಲ್ಲಿತ್ತು.
ದೇಶೀಯ ಮೀನು ಶೇ.25ರಷ್ಟು ಈ ಹಿಂದಿನ ವಾರದಲ್ಲಿ ದುಬಾರಿಯಾಗಿತ್ತು. ಕೋಳಿ ಮೊಟ್ಟೆ ಶೇ.10, ಕೆಂಪು ತೊಗರಿ ಶೇ.8, ಹಾಲು ಶೇ.5 ಹಾಗೂ ಹಣ್ಣು-ಹಂಪಲು ಮತ್ತು ತರಕಾರಿ ಬೆಲೆಯಲ್ಲಿ ಶೇ.3ರ ಏರಿಕೆಯಾಗಿತ್ತು.
ಅದೇ ಹೊತ್ತಿಗೆ ಇಂಧನ, ವಿದ್ಯುತ್, ಲೈಟ್ ಮತ್ತು ಕೀಲೆಣ್ಣೆಗಳ ಸೂಚ್ಯಂಕ ದರವು ಯಾವುದೇ ಬದಲಾವಣೆ ಕಂಡಿರಲಿಲ್ಲ. ಆಗಸ್ಟ್ 15ಕ್ಕೆ ಕೊನೆಗೊಂಡ ವಾರದಲ್ಲಿ ಉತ್ಪಾದನಾ ವಸ್ತುಗಳ ದರದಲ್ಲಿ ಶೇ.0.1, ಉತ್ಪಾದನಾ ಆಹಾರ ವಸ್ತುಗಳ ದರದಲ್ಲಿ ಶೇ.0.7ರಷ್ಟು ಏರಿಕೆಯಾಗಿತ್ತು.