ಪ್ರಸಕ್ತ ಹಣಕಾಸು ವರ್ಷದಲ್ಲಿ ಕೃಷಿ ಪ್ರಗತಿಯು ಕುಂಠಿತಗೊಳ್ಳಲಿದೆ ಎಂಬುದನ್ನು ಒಪ್ಪಿಕೊಂಡಿರುವ ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್, ಬರಪೀಡಿತ ಜಿಲ್ಲೆಗಳ ರೈತರಿಂದ ಕೃಷಿ ಸಾಲವನ್ನು ಬ್ಯಾಂಕುಗಳು ಈ ವರ್ಷ ಮಾಡುವುದಿಲ್ಲ; ಈ ಸಂಬಂಧ ಬ್ಯಾಂಕುಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಖಾಸಗಿ ಟೀವಿ ವಾಹಿನಿಯೊಂದರ ಜತೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಸಚಿವರು, ಕೃಷಿ ಕ್ಷೇತ್ರದ ಪ್ರಗತಿ ಖಂಡಿತಾ ಕುಗ್ಗಲಿದೆ ಎಂದು ಅಭಿಪ್ರಾಯಪಟ್ಟರು.
ಆದರೆ ಮುಂದೆ ಸಂಭವಿಸುವ ಬೆಳೆಯಲ್ಲಿನ ಕುಸಿತವನ್ನು ಅಂದಾಜಿಸಿ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. 'ಉತ್ಪಾದನೆ ಎಷ್ಟಿರಬಹುದು ಎಂದು ಈಗಲೇ ಹೇಳುವುದು ಅಸಾಧ್ಯ. ಆ ಬಗ್ಗೆ ನನಗೆ ತಿಳಿದಿಲ್ಲ. ಒಟ್ಟು ಬೆಳೆಯ ಕುರಿತು ನನಗೆ ಯಾವುದೇ ಖಚಿತತೆಯಿಲ್ಲ' ಎಂದರು.
2008-09ರ ಅವಧಿಯಲ್ಲಿ ಕೃಷಿ ವಲಯವು ಶೇ.1.6ರ ಪ್ರಗತಿ ದಾಖಲಿಸಿತ್ತು.
ಕೃಷಿ ಸಾಲ ಪಡೆದ ಬೆನ್ನಿಗೆ ಬರದಿಂದ ಕಂಗೆಟ್ಟಿರುವ ರೈತರನ್ನು ಸಮಾಧಾನಗೊಳಿಸುವ ಯತ್ನವನ್ನೂ ಪವಾರ್ ಮಾಡಿದ್ದಾರೆ. ಬರಪೀಡಿತ ಜಿಲ್ಲೆಗಳ ರೈತರಿಂದ ಕೃಷಿ ಸಾಲವನ್ನು ಪ್ರಸಕ್ತ ವರ್ಷ ವಸೂಲಿ ಮಾಡದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಇತರ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ ಎಂದರು.
ದೇಶದ 600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 246 ಜಿಲ್ಲೆಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದೆ. ಮಳೆಯ ತೀವ್ರ ಅಭಾವ ಕಂಡು ಬಂದ ಜಿಲ್ಲೆಗಳನ್ನು ಈ ವಲಯಕ್ಕೆ ತರಲಾಗಿದೆ.
'ರಾಜ್ಯ ಸರಕಾರಗಳಿಂದ ಬರಪೀಡಿತ ಎಂದು ಘೋಷಿತವಾಗಿರುವ ಜಿಲ್ಲೆಗಳ ರೈತರಿಂದ ಈ ವರ್ಷ ಸಾಲ ವಸೂಲಿ ಮಾಡದಂತೆ ಎಲ್ಲಾ ಬ್ಯಾಂಕ್‌ಗಳಿಗೆ ಕೇಂದ್ರೀಯ ಬ್ಯಾಂಕ್ ಆದೇಶ ನೀಡಿದೆ' ಎಂದು ಪವಾರ್ ತಿಳಿಸಿದ್ದಾರೆ.
ರೈತರು 2010ರ ಜೂನ್ ಒಳಗೆ ಅವರು ಮರು ಪಾವತಿ ಮಾಡಿದ್ದಲ್ಲಿ, ಅದನ್ನು ಹಿಂದಕ್ಕೆ ಪಡೆಯಲಾಗದು. ಆದರೆ ರೈತರಿಗೆ ಹೊಸ ಸಾಲಗಳನ್ನು ಬ್ಯಾಂಕುಗಳು ನೀಡಬೇಕು. ಮೂರು ವರ್ಷಗಳ ಕಂತಿನ ಸಾಲವನ್ನು ನೀಡಲು ನಿರ್ದೇಶನ ನೀಡಲಾಗಿದೆ ಎಂದು ಪವಾರ್ ವಿವರಣೆ ನೀಡಿದರು.