ಅಂತರ್ಜಾಲ ಬಳಸುವವರು ಒಂದಲ್ಲ ಒಂದು ಕಾರಣಕ್ಕೆ ವಿಕಿಪೀಡಿಯಾದ ಮೊರೆ ಹೋಗಿಯೇ ಇರುತ್ತಾರೆ. ಕೆಲವರು ಸಮಗ್ರ ಮಾಹಿತಿಗಾಗಿ ತಡಕಾಡುತ್ತಾರೆ. ಹೀಗೆ ಜಗತ್ತಿನಾದ್ಯಂತ ವಿಕಿಪೀಡಿಯಾದಲ್ಲಿ ಜಾಲಾಡಿದ ಪುಟಗಳ 2009ರ ಅಗ್ರ 20ರಲ್ಲಿ 'ಇಂಡಿಯಾ' ಕಾಣಿಸಿಕೊಂಡಿದೆ. ಭಾರತ ಸೂಪರ್ ಪವರ್ ಆಗುತ್ತಿದೆ ಎಂಬುದನ್ನು ವಿಶ್ವವೇ ತಿಳಿದುಕೊಳ್ಳುತ್ತಿದೆ ಎಂದು ಅಂದುಕೊಳ್ಳಬಹುದೇ?
ವಿಕಿಪೀಡಿಯಾ ವೆಬ್‌ಸೈಟ್ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ 'ಇಂಡಿಯಾ' ಎಂಬ ಶಬ್ದವನ್ನು ಈ ವರ್ಷ ವಿಕಿಪೀಡಿಯಾದಲ್ಲಿ ಪ್ರತೀ ದಿನ ಸರಾಸರಿ 25,380 ಮಂದಿ ಹುಡುಕುತ್ತಿದ್ದಾರೆ. ಅತೀ ಹೆಚ್ಚು ವಿಕಿಪೀಡಿಯಾದಲ್ಲಿ ಹುಡುಕಲ್ಪಡುವ ಅಗ್ರ 20 ಶಬ್ದಗಳಲ್ಲಿ ಭಾರತ 18ನೇ ಸ್ಥಾನ ಪಡೆದುಕೊಂಡಿದೆ.
ಒಂದು ದೇಶದ ಹೆಸರನ್ನು ವಿಕಿಪೀಡಿಯಾದಲ್ಲಿ ಹುಡುಕಿದ ಪಟ್ಟಿ ನೋಡಿದಾಗ ಭಾರತಕ್ಕೆ ಎರಡನೇ ಸ್ಥಾನ. ಇಲ್ಲಿ ಅಮೆರಿಕಾ ಮೊದಲ ಸ್ಥಾನ ಪಡೆದುಕೊಂಡಿದೆ. ಅಮೆರಿಕಾದ ಮಾಹಿತಿಯನ್ನು (ಯುನೈಟೆಡ್ ಸ್ಟೇಟ್ಸ್) ಪ್ರತೀ ದಿನ 46,545 ಮಂದಿ ವಿಕಿಪೀಡಿಯಾದಲ್ಲಿ ಹುಡುಕುತ್ತಿದ್ದಾರೆ.
ಅಂದ ಹಾಗೆ ಭಾರತ 2008ರ ಶೋಧ ಪಟ್ಟಿಯಲ್ಲಿ 26ನೇ ಸ್ಥಾನ ಪಡೆದಿತ್ತು. ಕಳೆದ ವರ್ಷ ಪ್ರತೀ ದಿನ 'ಇಂಡಿಯಾ' ಎಂದು ವಿಕಿಪೀಡಿಯಾದಲ್ಲಿ ಟೈಪ್ ಮಾಡಿ ಲೇಖನ ಹುಡುಕುತ್ತಿದ್ದವರ ಸಂಖ್ಯೆ 22,328 ಆಗಿತ್ತು.
ಅತೀ ಹೆಚ್ಚು ವೀಕ್ಷಿಸಲ್ಪಟ್ಟಿರುವ ಲೇಖನ 'ವೀಕಿ'. ಇದನ್ನು ಪ್ರತೀ ದಿನ 131,383 ಮಂದಿ ನೋಡುತ್ತಿದ್ದಾರೆ. ಎರಡನೇ ಸ್ಥಾನ 'ದಿ ಬೀಟಲ್ಸ್' ಪಾಲಾಗಿದೆ. ಮೂರನೇ ಸ್ಥಾನ ಪಾಪ್ ಲೋಕದಿಂದ ಇತ್ತೀಚೆಗಷ್ಟೇ ಕಣ್ಮರೆಯಾಗಿದ್ದ ಮೈಕೆಲ್ ಜಾಕ್ಸನ್‌ನದ್ದು. ಆತನ ಕುರಿತ ಪುಟವನ್ನು ಪ್ರತೀ ದಿನ 79,734 ಮಂದಿ ವೀಕ್ಷಿಸುತ್ತಿದ್ದಾರೆ.
ಉಳಿದಂತೆ ಅಗ್ರ 20ರ ಪಟ್ಟಿಯಲ್ಲಿ ಯೂ ಟ್ಯೂಬ್, ವಿಕಿಪೀಡಿಯಾ, ಬರಾಕ್ ಒಬಾಮಾ, 200ರಲ್ಲಿನ ಸಾವುಗಳು, ಫೇಸ್‌ಬುಕ್, ಎರಡನೇ ಮಹಾಯುದ್ಧ, ಟ್ವಿಟ್ಟರ್, ಸ್ಲಮ್‌ಡಾಗ್ ಮಿಲಿಯನೇರ್, ಅಡಾಲ್ಫ್ ಹಿಟ್ಲರ್ ಮುಂತಾದ ಪುಟಗಳು ಸ್ಥಾನ ಪಡೆದಿವೆ.
ಸೆಕ್ಸ್, ಇಂಗ್ಲೆಂಡ್, ಅಬ್ರಹಾಂ ಲಿಂಕನ್, 2009ರಲ್ಲಿ ಎಚ್1ಎನ್1 ಸೋಂಕು, ಆಸ್ಟ್ರೇಲಿಯಾ, ಕೆನಡಾ, ಸ್ತ್ರೀಯರ ದೇಹರಚನೆ, ಜಪಾನ್, ವಿಂಡೋಸ್ 7 ಮುಂತಾದುವುಗಳು ಅಗ್ರ 50ರ ಪಟ್ಟಿಯಲ್ಲಿವೆ.