ಮಳೆ ಅಭಾವದಿಂದಾಗಿ 10 ರಾಜ್ಯಗಳ 252 ಜಿಲ್ಲೆಗಳು ಬರಪೀಡಿತವಾಗಿರುವ ಕಾರಣ ಪ್ರಸಕ್ತ ಅವಧಿಯ ಕೃಷ್ಯುತ್ಪನ್ನವು ಶೇ.15ರಿಂದ 20ರಷ್ಟು ಕುಸಿತವಾಗಲಿದೆ ಎಂದು ಹಣಕಾಸು ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಬರಗಾಲದ ಪರಿಣಾಮ ಮುಂಗಾರು ಬೆಳೆಯ ಉತ್ಪನ್ನದ ಮೇಲೆ ಎಷ್ಟಾಗಿದೆ ಎಂಬುದನ್ನು ಕಟಾವು ಆರಂಭವಾದ ಮೇಲಷ್ಟೇ ಖಚಿತವಾಗಿ ಹೇಳಬಹುದು. ಆದರೆ ಬಿತ್ತನೆ ಆಧಾರದಲ್ಲಿ ಅಂದಾಜು ಮಾಡುವುದಾದರೆ ಸುಮಾರು ಶೇ.15ರಿಂದ 20ರಷ್ಟು ಕೊರತೆಯಾಗಬಹುದು ಎಂದು ಎಫ್‌ಐಸಿಸಿಐ ಸಮಾವೇಶದಲ್ಲಿ ಮಾತನಾಡುತ್ತಾ ವಿವರಣೆ ನೀಡಿದರು.
ದೇಶದ 10 ರಾಜ್ಯಗಳಲ್ಲಿನ 252 ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಅಲ್ಲಿ ಬರಗಾಲ ಪರಿಸ್ಥಿತಿಯಿದ್ದು, ಶೇ.26ರಷ್ಟು ಮಳೆಯ ಕೊರತೆಯಾಗಿದೆ ಎಂದರು.
ಆಗಸ್ಟ್ 21ರವರೆಗೆ ದೇಶದಲ್ಲಿನ 600ಕ್ಕಿಂತಲೂ ಹೆಚ್ಚು ಜಿಲ್ಲೆಗಳಲ್ಲಿ 246 ಜಿಲ್ಲೆಗಳು ಬರಪೀಡಿತವಾಗಿವೆ ಎಂದು ಸರಕಾರಗಳು ಪ್ರಕಟಿಸಿದ್ದವು.
ಈ ಹಿಂದೆ ಹೇಳಿಕೆ ನೀಡಿದ್ದ ಕೃಷಿ ಸಚಿವ ಶರದ್ ಪವಾರ್, ಬರಗಾಲದ ಕಾರಣದಿಂದ ಪ್ರಸಕ್ತ ಅವಧಿಯ ಭತ್ತದ ಬೆಳೆಯಲ್ಲಿ 10 ಮಿಲಿಯನ್ ಟನ್ ಕುಸಿತವಾಗಬಹುದು. ಅದೇ ರೀತಿ ತೈಲಬೀಜ ಮತ್ತು ಕಬ್ಬಿನಲ್ಲಿಯೂ ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದರು.
ಕಳೆದ ವರ್ಷದ ಮುಂಗಾರು ಬೆಳೆಯಲ್ಲಿ ಭಾರತವು 117.7 ಮಿಲಿಯನ್ ಟನ್ ಆಹಾರ ಪದಾರ್ಥಗಳನ್ನು ಭಾರತ ಉತ್ಪಾದಿಸಿತ್ತು. ಅದರಲ್ಲಿ 84.58 ಮಿಲಿಯನ್ ಟನ್ ಅಕ್ಕಿ ಪಾಲು ಹೊಂದಿತ್ತು.