ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಕೊಡುವ ದೇಶವೆಂಬ ಹೆಗ್ಗಳಿಕೆ ಸ್ವಿಟ್ಜರ್ಲೆಂಡ್‌ನದ್ದು. ಆ ದೇಶದ ಝುರಿಕ್ ಮತ್ತು ಜಿನೇವಾಗಳಲ್ಲಿ ಅತೀ ಹೆಚ್ಚಿನ ವೇತನ ನೀಡಲಾಗುತ್ತಿದೆಯಂತೆ. ಮುಂಬೈ ನಗರದ ಸಂಬಳವು ವಿಶ್ವದಲ್ಲೇ ಅತೀ ಕಡಿಮೆಯಾದದ್ದು ಎನ್ನುವ ಮೂಲಕ ಭಾರತ ಮೂದಲಿಕೆಗೊಳಗಾಗಿದೆ.
ಯುಬಿಎಸ್ ಬ್ಯಾಂಕಿಂಗ್ ಸಮೂಹ ನಡೆಸಿದ ಅಧ್ಯಯನದಿಂದ ಈ ವರದಿ ಹೊರ ಬಿದ್ದಿದೆ. ಅತೀ ಹೆಚ್ಚಿನ ವೇತನ ನೀಡಿ, ಕಡಿಮೆ ತೆರಿಗೆ ವಿಧಿಸುವುದರ ಮೂಲಕ ಸ್ವಿಟ್ಜರ್ಲೆಂಡ್ ನೌಕರ-ಸ್ನೇಹಿ ರಾಷ್ಟ್ರ ಎಂಬ ಪ್ರೀತಿಗೆ ಪಾತ್ರವಾಗಿದೆ ಎಂದು ಸ್ವಿಸ್ ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಂದ ಹಾಗೆ ಈ ಸ್ವಿಸ್ ನಗರಗಳು ವಿಶ್ವದ ಅತಿ ದುಬಾರಿ ನಗರಗಳ ಪಟ್ಟಿಯಲ್ಲಿ ಅಗ್ರ ಐದರಲ್ಲಿ ಕಾಣಿಸಿವೆ. ಬ್ಯಾಂಕ್ ಬಿಡುಗಡೆ ಮಾಡಿರುವ 'ಖರ್ಚು ಮತ್ತು ಗಳಿಕೆ' ಎಂಬ ಅಂತಾರಾಷ್ಟ್ರೀಯ ಸಮೀಕ್ಷೆಯಲ್ಲಿ ಇದನ್ನು ಹೊರಗೆಡವಲಾಗಿದೆ.
ತಿಂಗಳ ಕೊನೆಗೆ ಝುರಿಕ್ ಮತ್ತು ಜಿನೇವಾಗಳ ನೌಕರರು ಮನೆಗೆ ಕೊಂಡು ಹೋಗವಷ್ಟು ಆದಾಯ ಇತರ ಯಾವುದೇ ನಗರಗಳ ಉದ್ಯೋಗಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಈ ವರದಿ ತಿಳಿಸಿದೆ.
ಪ್ರತೀ ಮೂರು ವರ್ಷಗಳಿಗೊಮ್ಮೆ ಈ ಅಧ್ಯಯನವನ್ನು ನಡೆಸಲಾಗುತ್ತದೆ. ಜಗತ್ತಿನ ಪ್ರಮುಖ 73 ನಗರಗಳನ್ನು ಗುರಿಯಾಗಿರಿಸಿಕೊಂಡು ನಡೆಸಲಾಗುವ ಈ ಸಮೀಕ್ಷೆಯಲ್ಲಿ ಆದಾಯ ಮತ್ತು ನೌಕರರ ಖರೀದಿಯ ಸಾಮರ್ಥ್ಯವನ್ನು ಹೋಲಿಕೆ ಮಾಡಿ ವೇತನದ ಉಳಿಕೆಯನ್ನು ಪ್ರಾಂತ್ಯಗಳಿಗೆ ಸಂಬಂಧಪಟ್ಟಂತೆ ನಿರ್ಧರಿಸಲಾಗುತ್ತದೆ.
ವಿಶ್ವದಲ್ಲೇ ಅತಿ ಕಡಿಮೆ ಖರ್ಚಿನಲ್ಲಿ ಜೀವನ ಸಾಗಿಸಬಹುದಾದ ಅಗ್ರ ನಾಲ್ಕು ನಗರಗಳಲ್ಲಿ ದೆಹಲಿ ಮತ್ತು ಮುಂಬೈಗಳು ಕೂಡ ಸ್ಥಾನ ಪಡೆದಿವೆ. ಮಲೇಷಿಯಾದ ಕೌಲಲಾಂಪುರ, ಫಿಲಿಫೈನ್ಸ್‌ನ ಮಾನಿಲ ನಗರಗಳು ಇಲ್ಲಿ ಅಗ್ರ ಸ್ಥಾನದಲ್ಲಿವೆ.
ಈ ಅಧ್ಯಯನದ ವರದಿಯ ಪ್ರಕಾರ ಝುರಿಕ್ ಮತ್ತು ನ್ಯೂಯಾರ್ಕ್‌ಗಳಲ್ಲಿ ದಿನದ 9 ಗಂಟೆಗಳ ಕೆಲಸ ಮಾಡಿದ ನಂತರ ಆಪಲ್ ಸ್ಟೋರ್‌ನಿಂದ ಒಂದು ಐಪಾಡ್ ನ್ಯಾನೋ ಖರೀದಿಸಬಹುದು. ಆದರೆ ಇದನ್ನೇ ಮುಂಬೈಯಲ್ಲಿ ಮಾಡಬೇಕಾದರೆ 20 ಗಂಟೆಗಳ ಕಾಲ ಒಂಬತ್ತು ದಿನ ದುಡಿಯಬೇಕು. ಅಂದರೆ ಸರಿಸುಮಾರು ಒಂದು ತಿಂಗಳ ಸಂಬಳವೇ ಬೇಕು ಎಂದು ಸಮೀಕ್ಷೆ ತಿಳಿಸಿದೆ.