ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಉದ್ಯಮವು ವೈಮಾನಿಕ ಇಂಧನದ ಮೂಲ ದರದಲ್ಲಿ ಕಡಿತಗೊಳಿಸುವಂತೆ ಮಾಡಿದ್ದ ಮನವಿಯನ್ನು ಪೆಟ್ರೋಲಿಯಂ ಸಚಿವಾಲಯ ತಿರಸ್ಕರಿಸಿದೆ.
ಜೆಟ್ ಇಂಧನ ಅಥವಾ ವೈಮಾನಿಕ ಇಂಧನದ ಮೂಲ ದರವು ಅಂತಾರಾಷ್ಟ್ರೀಯ ಆಮದು ದರವನ್ನು ಹೊಂದಿಕೊಂಡಿದ್ದು, ಇಲ್ಲಿ ವಿಧಿಸಲಾಗುವ ತೆರಿಗೆಯು ಮಹತ್ವದ್ದಾಗಿದೆ ಎಂದು ಪೆಟ್ರೋಲಿಯಂ ಕಾರ್ಯದರ್ಶಿ ಆರ್.ಎಸ್. ಪಾಂಡೆ ಗುರುವಾರ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ದೇಶದ ತೈಲ ಸಂಸ್ಥೆಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂಗಳು ಅಂತಾರಾಷ್ಟ್ರೀಯ ದರವನ್ನು ಪಾವತಿಸಿ ಕಚ್ಚಾ ತೈಲವನ್ನು ಖರೀದಿಸುತ್ತವೆ. ಹಾಗಾಗಿ ಶುದ್ಧೀಕರಣಗೊಂಡ ತೈಲಗಳಿಗೂ ಅಂತಾರಾಷ್ಟ್ರೀಯ ಬೆಲೆಗಳನ್ನು ಹೊಂದಿಸಿಕೊಂಡು ಕಂಪನಿಗಳು ದರ ನಿಗದಿ ಮಾಡುತ್ತವೆ.
ಕಚ್ಚಾ ತೈಲವನ್ನು ಖರೀದಿಸಿದ ನಂತರ ದೇಶದ ತೈಲ ಶುದ್ಧೀಕರಣ ಸಂಸ್ಥೆಯು ಉಳಿಸಿಕೊಳ್ಳುವ ಲಾಭ ತೀರಾ ಕಡಿಮೆಯಾಗಿದೆ. ಇದರಿಂದಾಗಿ ಅವರು ಇತ್ತೀಚಿನ ದಿನಗಳಲ್ಲಿ ಕುಗ್ಗಿ ಹೋಗಿದ್ದಾರೆ. ಹಾಗಾಗಿ ನೀವು ಮೂಲ ದರದಲ್ಲಿ ಕಡಿತಗೊಳಿಸುವ ಬೇಡಿಕೆಯಿಡುವ ಬದಲಿಗೆ ಅವರನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ವೈಮಾನಿಕ ಉದ್ಯಮಕ್ಕೆ ಅವರು ಕರೆ ನೀಡಿದರು.
ಕೇಂದ್ರ ಮತ್ತು ರಾಜ್ಯಗಳು ವೈಮಾನಿಕ ಇಂಧನ ದರದ ಮೇಲೆ ಮೂರನೇ ಒಂದಕ್ಕಿಂತಲೂ ಹೆಚ್ಚು ತೆರಿಗೆ ವಿಧಿಸುತ್ತಿರುವುದಕ್ಕೆ ಉತ್ತರಿಸಿದ ಅವರು, ವೈಮಾನಿಕ ಇಂಧನವು ಅನಿಯಂತ್ರಿತ ಪದಾರ್ಥವಾದ ಕಾರಣ ಸರಕಾರದ ನಿಯಂತ್ರಣದಲ್ಲಿಲ್ಲ ಎಂದರು.
ಹಣಕಾಸು ಸಮಸ್ಯೆಯಿಂದ ಬಳಲುತ್ತಿರುವ ವಿಮಾನಯಾನ ಸಂಸ್ಥೆಗಳು ಇತ್ತೀಚೆಗೆ ವೈಮಾನಿಕ ಇಂಧನ ದರದ ಮೇಲಿನ ತೆರಿಗೆಯನ್ನು ಕಡಿತಗೊಳಿಸುವಂತೆ ರಾಜ್ಯಗಳಲ್ಲಿ ಮನವಿ ಮಾಡಿದ್ದವು. ಆದರೆ ರಾಜ್ಯಗಳು ಈ ಬೇಡಿಕೆಯನ್ನು ತಿರಸ್ಕರಿಸಿವೆ. ಕೆಲವು ರಾಜ್ಯಗಳು ಶೇ.30ರಷ್ಟು ತೆರಿಗೆ ವಿಧಿಸುತ್ತಿರುವ ಕಾರಣ ವೈಮಾನಿಕ ಸೇವೆ ದುಸ್ತರವಾಗುತ್ತಿವೆ ಎಂಬುದು ಸಂಸ್ಥೆಗಳ ಅಳಲು.