ಎಚ್1ಎನ್1 ಫ್ಲೂ ವೈರಸ್‌ಗೆ ಪ್ರಸಕ್ತ ಲಭ್ಯವಿರುವ ಏಕೈಕ ಔಷಧಿ 'ಒಸೆಲ್ಟಾಮಿವಿರ್'ನ್ನು ಚಿಲ್ಲರೆ ಮಾರಾಟ ಮಾಡಲು ಅಗತ್ಯವಿರುವ ಅನುಮತಿ ನೀಡಲಾಗುತ್ತದೆ ಎಂದು ಕೇಂದ್ರ ಸರಕಾರ ಶುಕ್ರವಾರ ತಿಳಿಸಿದೆ.
ಈ ಸಂಬಂಧ ಸರಕಾರ ಅಧಿಕೃತ ಆದೇಶವನ್ನು ಹೊರಡಿಸಲಿದ್ದು, ಔಷಧದ ಅಂಗಡಿಗಳಲ್ಲಿ ಮಾರಾಟ ಮಾಡಲು ಆರು ಕಂಪನಿಗಳು ಅವಕಾಶ ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಹಂದಿ ಜ್ವರಕ್ಕಾಗಿನ ಏಕೈಕ ಮದ್ದು 'ಒಸೆಲ್ಟಾಮಿವಿರ್'ನ್ನು ಮೆಡಿಕಲ್‌ಗಳು ಮಾರಾಟ ಮಾಡಲು ಅವಕಾಶ ನೀಡುವ ಆದೇಶವನ್ನು ಮುಂದಿನ 10-12 ದಿನಗಳಲ್ಲಿ ಹೊರಡಿಸುವ ನಿರೀಕ್ಷೆಗಳಿವೆ ಎಂದು 'ಸಿಐಐ ಲೈಫ್ ಲೈನ್ಸ್ ಕಾನ್‌ಕ್ಲೇವ್' ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ ಭಾರತೀಯ ಪ್ರಧಾನ ಔಷಧಿ ನಿರ್ದೇಶಕ ಸುರೀಂದರ್ ಸಿಂಗ್ ತಿಳಿಸಿದ್ದಾರೆ.
ಇದುವರೆಗೆ ರಾನ್‌ಬಾಕ್ಸಿ, ಸಿಪ್ಲಾ, ಮೆಟ್ಕೋ, ಹೆಟೇರೋ, ಸ್ಟ್ರೈಡ್ಸ್ ಮತ್ತು ರೋಚ್ ಎಂಬ ಆರು ಕಂಪನಿಗಳಿಗೆ ಮಾತ್ರ ಔಷಧ ತಯಾರಿಕೆ ಮತ್ತು ವಿತರಣೆಗೆ ಸರಕಾರ ಅವಕಾಶ ನೀಡಿದೆ.
ರೋಚ್ ಸಂಸ್ಥೆಯ 'ಟ್ಯಾಮಿಫ್ಲೂ' ಔಷಧದ ಮತ್ತೊಂದು ರೂಪಾಂತರ 'ಒಸೆಲ್ಟಾಮಿವಿರ್' ಔಷಧಿ. ಹೊಸ ನಿಯಮಾವಳಿಗಳ ಮೂಲಕ ಈ ಔಷಧಿಗಳನ್ನು ಮೆಡಿಕಲ್‌ಗಳಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ.
ದೇಶದಲ್ಲಿ ಹಂದಿಜ್ವರವನ್ನು ತಡೆಗಟ್ಟುವ ಸಲುವಾಗಿ ಔಷಧಿಗಳನ್ನು ತಯಾರಿಸಲು ಮತ್ತು ಅಭಿವೃದ್ಧಿಪಡಿಸಲು ಇನ್ನೂ ಆರು ಕಂಪನಿಗಳು ಆಸಕ್ತಿವಹಿಸಿರುವುದನ್ನು ಇದೇ ಸಂದರ್ಭದಲ್ಲಿ ಸಿಂಗ್ ತಿಳಿಸಿದ್ದಾರೆ.
ದೇಶದಾದ್ಯಂತ ತ್ವರಿತವಾಗಿ ಹರಡುತ್ತಿರುವ ಹಂದಿಜ್ವರವನ್ನು ತಡೆಗಟ್ಟುವ ಸಲುವಾಗಿ ಅದರ ಔಷಧವನ್ನು ಎಲ್ಲೆಡೆ ದೊರಕುವಂತೆ ಮಾಡುವುದು ಸರಕಾರದ ಉದ್ದೇಶವಾಗಿದೆ.