ವಿಮಾನಯಾನ ಸೇವೆಯು ಸಾರ್ವಜನಿಕ ಸೇವಾ ಸೌಲಭ್ಯವಾಗಿರುವುದರಿಂದ, ಜೆಟ್ ಏರ್‌ವೇಸ್ ಪೈಲಟ್‌ಗಳ ಸಂಘಟನೆಯು ಮುಷ್ಕರಕ್ಕೆ ಮುಂದಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾದೀತು ಪ್ರಾದೇಶಿಕ ಕಾರ್ಮಿಕ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ ಜೆಟ್ ಪೈಲಟ್‌ಗಳ ಅಸೋಸಿಯೇಷನ್ 'ನ್ಯಾಷನಲ್ ಏವಿಯೇಟರ್ಸ್ ಗಿಲ್ಡ್', ಸಂಧಾನ ಮಾತುಕತೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಮುಷ್ಕರಕ್ಕೆ ಮುಂದಾದರೆ ಕಾನೂನು ಭಂಗ ಮಾಡಿದಂತಾಗುತ್ತದೆ ಎಂದು ಜೆಟ್ ಏರ್‌ವೇಸ್‌ಗೆ ಕಾರ್ಮಿಕ ಆಯುಕ್ತರು ತಿಳಿಸಿದ್ದಾರೆ.
650 ಪೈಲಟ್‌ಗಳ ಸದಸ್ಯತ್ವವನ್ನು ತಾನು ಹೊಂದಿದ್ದೇನೆ ಎಂದು ಹೇಳುತ್ತಿರುವ ನ್ಯಾಷನಲ್ ಏವಿಯೇಟರ್ಸ್ ಗಿಲ್ಡ್, ಜೆಟ್ ಏರ್‌ವೇಸ್ ವಜಾಗೊಳಿಸಿರುವ ಇಬ್ಬರು ಪೈಲಟ್‌ಗಳನ್ನು ಮತ್ತೆ ಸೇವೆಗೆ ವಾಪಸು ಕರೆಸಿಕೊಳ್ಳಲಿದ್ದರೆ ಸೆಪ್ಟೆಂಬರ್ 7ರಿಂದ ಮುಷ್ಕರ ನಡೆಸುವ ಬೆದರಿಕೆ ಹಾಕಿದ್ದ ಹಿನ್ನಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.
ಜೆಟ್ ಏರ್‌ವೇಸ್ ಸಾರ್ವಜನಿಕ ಸೇವಾ ಸೌಲಭ್ಯವಾಗಿರುವ ಕಾರಣ ಯಾವುದೇ ನೀತಿಯ ಅತಿಕ್ರಮಣ ಅಥವಾ ಉಲ್ಲಂಘನೆ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿದೆ ಎಂದು ಆಯುಕ್ತರ ಪತ್ರ ತಿಳಿಸಿದೆ ಎಂಬುದನ್ನು ಜೆಟ್ ವಕ್ತಾರರು ತಿಳಿಸಿದ್ದಾರೆ.
ಗುರುವಾರ ಈ ಪತ್ರವನ್ನು ಜೆಟ್ ಏರ್‌ವೇಸ್ ಸ್ವೀಕರಿಸಿದೆ ಎಂದು ತಿಳಿಸಿರುವ ಸಂಸ್ಥೆಯ ವಕ್ತಾರರು, ಪ್ರಯಾಣಿಕರಿಗೆ ತೊಂದರೆಯಾಗದಂತೆ ವಿಮಾನಯಾನ ವೇಳಾಪಟ್ಟಿ ಮತ್ತು ನಿರ್ವಹಣೆಯನ್ನು ಮಾಡಲಾಗುತ್ತದೆ ಎಂಬುದರ ಬಗ್ಗೆ ನಮಗೆ ಭರವಸೆಯಿದೆ ಎಂದರು.