ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.6 ಜಿಡಿಪಿ ಸಾಧ್ಯ: ಮುಖರ್ಜಿ
ನವದೆಹಲಿ, ಶುಕ್ರವಾರ, 28 ಆಗಸ್ಟ್ 2009( 18:23 IST )
ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.6ಕ್ಕಿಂತ ಹೆಚ್ಚಿನ ಪ್ರಗತಿ ಸಾಧ್ಯವಿದೆ ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ಆಶಾವಾದ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಆರ್ಥಿಕ ವಲಯ ಪರಿಷ್ಕರಣೆ ಮತ್ತು ಬಂಡವಾಳ ಹಿಂತೆಗೆತ ಕುರಿತಂತೆ ಕಳವಳಕ್ಕೊಳಗಾಗಲು ಅವಕಾಶವಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಒಟ್ಟು ದೇಶೀಯ ಉತ್ಪಾದನೆ ಪ್ರಗತಿಯು ಶೇ.8ರಲ್ಲಿತ್ತು. 2008-09ರ ಸಾಲಿನಲ್ಲಿ ಇದು ಶೇ.6.7ರಲ್ಲಿತ್ತು. ಬರಗಾಲದ ಕಾರಣದಿಂದ ಈ ವರ್ಷ ಹೇಗಿರಬಹುದು ಎಂದು ಹೇಳುವುದು ಕಷ್ಟಕರ. ಇಲ್ಲಿ ಯಾವುದೇ ದೊಡ್ಡ ಸಮಸ್ಯೆಗಳು ಅಥವಾ ನಿರ್ಬಂಧಗಳಿಲ್ಲದಿದ್ದರೆ 2009-10ರ ಸಾಲಿನಲ್ಲಿ ಶೇ.6ಕ್ಕಿಂತ ಹೆಚ್ಚಿನ ಜಿಡಿಪಿ ಪಡೆಯುವುದು ನಮ್ಮಿಂದ ಸಾಧ್ಯವಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸದಸ್ಯರ ಜತೆ ಸಂವಾದ ನಡೆಸುತ್ತಿದ್ದ ಮುಖರ್ಜಿ ತಿಳಿಸಿದ್ದಾರೆ.
ಕಳೆದ ವರ್ಷ ಮಧ್ಯಂತರದ ನಂತರ ಪೆಟ್ರೋಲಿಯಂ ದರಗಳು ಏರಿಕೆಯಾಗಿದ್ದರಿಂದ, ಹಣದುಬ್ಬರ ದರ ಹೆಚ್ಚಳ ಮತ್ತು ಜಾಗತಿಕ ಆರ್ಥಿಕ ಸಮಸ್ಯೆಯಿಂದಾಗಿ ಪ್ರಗತಿ ಸಾಧಿಸಲು ಕಷ್ಟವಾಗಿತ್ತು ಎಂದರು.
ಆದರೂ ಪರಿಸ್ಥಿತಿ ಸುಧಾರಿಸಲು ಕಳೆದ ವರ್ಷ ಪ್ರಧಾನ ಮಂತ್ರಿಯವರು ಎರಡು ಪರಿಹಾರ ಪ್ಯಾಕೇಜ್‌ಗಳನ್ನು ಪ್ರಕಟಿಸುವ ಮೂಲಕ ಆರ್ಥಿಕ ಕುಸಿತವನ್ನು ತಡೆಗಟ್ಟಿ, ಪ್ರಗತಿಯತ್ತ ಸಾಗಲು ಸಹಕರಿಸಿದ್ದರು ಎಂದು ಮುಖರ್ಜಿ ನುಡಿದರು.
ಬರಗಾಲ ಮತ್ತು ಇತರ ಸಮಸ್ಯೆಗಳನ್ನು ಉಲ್ಲೇಖಿಸುತ್ತಾ ಅವರು, ಜನರು ಮಾತನಾಡಿಕೊಳ್ಳುತ್ತಿರುವ ಆರ್ಥಿಕ ಪರಿಷ್ಕರಣೆ ವಿಚಾರದತ್ತ ಗಮನ ಹರಿಸಿದರು. ಆರ್ಥಿಕ ಕ್ಷೇತ್ರದ ಪರಿಷ್ಕರಣೆಯೆಂಬುದು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಸರಿಯಾದ ದಾರಿಯಲ್ಲೇ ಸಾಗುತ್ತಿದೆ. ಇಲ್ಲಿ ಆತಂಕಪಡಲು ಅವಕಾಶಗಳೇ ಇಲ್ಲ ಎಂದು ಸ್ಪಷ್ಟಪಡಿಸಿದರು.