ಅಕ್ಟೋಬರ್ 15ರಿಂದ ಅನ್ಯ ಬ್ಯಾಂಕುಗಳ ಎಟಿಎ ಯಂತ್ರಗಳಿಂದ ಬೇರೆ ಬ್ಯಾಂಕುಗಳ ಖಾತೆ ಹೊಂದಿರುವ ಗ್ರಾಹಕರು ಹಣ ಡ್ರಾ ಮಾಡುವುದನ್ನು ತಿಂಗಳಿಗೆ ಐದು ಬಾರಿ ಮತ್ತು ಪ್ರತೀ ವ್ಯವಹಾರ 10,000 ರೂಪಾಯಿಗಳಿಗೆ ಮೀರದಂತೆ ನಿರ್ಬಂಧ ಜಾರಿಗೆ ತರಲು ಬ್ಯಾಂಕುಗಳು ನಿರ್ಧರಿಸಿವೆ.
ಭಾರತೀಯ ಬ್ಯಾಂಕುಗಳ ಮಾತೃ ಸಂಘಟನೆ 'ಭಾರತೀಯ ಬ್ಯಾಂಕುಗಳ ಅಸೋಸಿಯೇಷನ್' (ಐಬಿಎ) ಈ ಸಂಬಂಧ ತನ್ನ 150 ಸದಸ್ಯ ಬ್ಯಾಂಕುಗಳಿಗೆ ನಿರ್ದೇಶನವನ್ನು ಕಳುಹಿಸಿದ್ದು, ಅಕ್ಟೋಬರ್ ಮಧ್ಯ ಭಾಗದ ನಂತರ ಎಟಿಎಂ ಕುರಿತ ನೂತನ ನಿಯಮವನ್ನು ಜಾರಿಗೆ ತರುವಂತೆ ಹೇಳಿದೆ ಎಂದು ಮೂಲಗಳು ಖಚಿತಪಡಿಸಿವೆ.
ಅನ್ಯ ಬ್ಯಾಂಕುಗಳ ಎಟಿಎಂ ವ್ಯವಹಾರದ ಮೇಲೆ ಅಕ್ಟೋಬರ್ 15ರಿಂದ ನಿಯಂತ್ರಣಗಳನ್ನು ಹೇರುವಂತೆ ಎಲ್ಲಾ ಬ್ಯಾಂಕುಗಳಿಗೆ ಐಬಿಎ ಸೂಚನೆ ನೀಡಿದೆ ಎಂದು ಮೂಲವೊಂದು ತಿಳಿಸಿದೆ.
ಅನ್ಯ ಬ್ಯಾಂಕುಗಳ ಎಟಿಎಂ ಯಂತ್ರದಿಂದ ಒಂದು ಸಲ 10,000ಕ್ಕಿಂತ ಹೆಚ್ಚು ಹಣವನ್ನು ತೆಗೆಯಲು ಅವಕಾಶ ನಿರಾಕರಣೆ ಮತ್ತು ತಿಂಗಳಲ್ಲಿ ಐದು ಸಲಕ್ಕಿಂತ ಹೆಚ್ಚು ಅನ್ಯ ಎಟಿಎಂನಲ್ಲಿ ವ್ಯವಹಾರ ನಡೆಸದಂತೆ ನಿರ್ಬಂಧ ಹೇರಲು ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗಷ್ಟೇ ನಿರ್ಧರಿಸಿತ್ತು.
ಆ ನಂತರ ನಡೆಸುವ ವ್ಯವಹಾರಗಳಿಗೆ ಸಂಬಂಧಪಟ್ಟ ಎಟಿಎಂ ಮಾಲಕತ್ವ ಹೊಂದಿರುವ ಬ್ಯಾಂಕುಗಳು ಬೇರೆ ಬ್ಯಾಂಕುಗಳ ಗ್ರಾಹಕರ ಮೇಲೆ ಶುಲ್ಕ ವಿಧಿಸಬಹುದಾಗಿದೆ. ತಾವು ಖಾತೆ ಹೊಂದಿರುವ ಬ್ಯಾಂಕಿನ ಎಟಿಎಂ ಯಂತ್ರಕ್ಕೆ ಇದು ಅನ್ವಯವಾಗುವುದಿಲ್ಲ.
ಈ ವರ್ಷದ ಏಪ್ರಿಲ್ 1ರಿಂದ ಆರ್‌ಬಿಐ ಯಾವುದೇ ಬ್ಯಾಂಕುಗಳ ಎಟಿಎಂಗಳಿಂದ ನಿರ್ವಹಣಾ ಶುಲ್ಕವಿಲ್ಲದೆ ಹಣ ಡ್ರಾ ಮಾಡಿಕೊಳ್ಳಬಹುದು ಎಂಬ ನಿಯಮವನ್ನು ಜಾರಿಗೆ ತಂದಿತ್ತು. ಆದರೆ ಇದರಿಂದ ಬ್ಯಾಂಕುಗಳಿಗೆ ವ್ಯಾವಹಾರಿಕ ಒತ್ತಡ ಹೆಚ್ಚುತ್ತದೆ ಎಂದು ಐಬಿಎ ದೂರು ಸಲ್ಲಿಸಿ, ಬದಲಾವಣೆಗೆ ಒತ್ತಾಯಿಸಿದ ಕಾರಣ ಆರ್‌ಬಿಐ ಹೊಸ ನಿಯಮಗಳಿಗೆ ಒಪ್ಪಿಗೆ ಸೂಚಿಸಿತ್ತು.