ಕಟ್ಟಡ ನಿರ್ಮಾಣ ಮಾಡಿದವರು ತಾವು ಬ್ಯಾಂಕುಗಳಿಂದ ಪಡೆದುಕೊಂಡ ಸಾಲದ ವಿವರಣಗಳನ್ನು ಮನೆ ಖರೀದಿ ಮಾಡುವವರಿಗೆ ಬಹಿರಂಗಪಡಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ.
ಇತ್ತೀಚೆಗಷ್ಟೇ ಬಾಂಬೆ ಉಚ್ಛ ನ್ಯಾಯಾಲಯ ನೀಡಿದ್ದ ತೀರ್ಪಿನ ಹಿನ್ನಲೆಯಲ್ಲಿ ಕಟ್ಟಡ ನಿರ್ಮಾಣಗಾರರು ಸಾಲ ಪಡೆದುಕೊಳ್ಳುವ ವೇಳೆ ಈ ಎಲ್ಲಾ ವಿವರಗಳನ್ನು ಒಪ್ಪಂದದಲ್ಲಿ ನಮೂದಿಸಲಾಗುವ ವಿಚಾರಗಳನ್ನು ತಿಳಿಸಬೇಕು ಎಂದು ಆರ್‌ಬಿಐ ಎಲ್ಲಾ ಬ್ಯಾಂಕುಗಳಿಗೆ ಆದೇಶಿಸಿದೆ.
ಗೃಹನಿರ್ಮಾಣ ಅಥವಾ ಅಭಿವೃದ್ಧಿ ಯೋಜನೆಗಳಿಗಾಗಿ ಕಟ್ಟಡ ನಿರ್ಮಾಣಗಾರ ಅಥವಾ ಅಭಿವೃದ್ಧಿಗಾರ ಅಥವಾ ಕಂಪನಿಗಳಿಗೆ ಹಣಕಾಸು ನೆರವು ನೀಡುವಾಗ ಕಡತಗಳು ಅಥವಾ ಕೈಪಿಡಿಗಳಲ್ಲಿ ಯಾವ ಆಸ್ತಿಯನ್ನು ಆಧಾರವಾಗಿಟ್ಟುಕೊಂಡು ಸಾಲ ನೀಡಲಾಗಿದೆ ಎಂಬುದನ್ನು ನಮೂದಿಸಲಾಗುತ್ತದೆ ಎಂದು ಗಮನಕ್ಕೆ ತರಬೇಕೆಂದು ಬ್ಯಾಂಕುಗಳಿಗೆ ಆರ್‌ಬಿಐ ನಿರ್ದೇಶನ ನೀಡಿದೆ.
ಕಟ್ಟಡ ನಿರ್ಮಾಣಗಾರನು ಆಸ್ತಿಯನ್ನು ಮಾರಾಟ ಮಾಡಲೆಂದು ದಿನ ಪತ್ರಿಕೆಗಳು ಅಥವಾ ವೃತ್ತ ಪತ್ರಿಕೆಗಳಲ್ಲಿ ಜಾಹಿರಾತು ನೀಡುವಾಗ ಸಾಲದ ವಿವರಗಳನ್ನು ಬಹಿರಂಗಪಡಿಸಬೇಕು ಮತ್ತು ಬ್ಯಾಂಕುಗಳಿಂದ ನಿರಪೇಕ್ಷಣಾ ಪತ್ರವನ್ನು ಪಡೆದುಕೊಂಡಿರುವ ಕುರಿತು ಉಲ್ಲೇಖಿಸಬೇಕು ಎಂದು ನಿಯಮಾವಳಿಗಳಲ್ಲಿ ತಿಳಿಸಲಾಗಿದೆ.
ಬ್ಯಾಂಕುಗಳು ವಿಧಿಸುವ ಇವೆಲ್ಲ ನಿಬಂಧನೆಗಳನ್ನು ಕಟ್ಟಡ ನಿರ್ಮಾಣಗಾರ ಅಥವಾ ಅಭಿವೃದ್ಧಿಗಾರ ಅಥವಾ ಸಂಸ್ಥೆಯು ಪಾಲಿಸುತ್ತಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಅವರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.