ಭಾರತದ ಮೊತ್ತ ಮೊದಲ ಮಾನವರಹಿತ ಗಗನನೌಕೆ ಚಂದ್ರಯಾನ-1ರ ಜತೆಗಿನ ರೇಡಿಯೋ ಸಂಪರ್ಕವನ್ನು ಇದ್ದಕ್ಕಿದ್ದಂತೆ ಇಸ್ರೋ ಕಳೆದುಕೊಂಡಿದ್ದು, ಬಹುತೇಕ ಅಕಾಲಿಕ ಸಾವಿಗೀಡಾದಂತಾಗಿದೆ.
ಕಕ್ಷೆಯಲ್ಲಿದ್ದ ಗಗನನೌಕೆಯ ನಿಯಂತ್ರಣವನ್ನು ಕಳೆದುಕೊಂಡಿರುವುದನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆಯೇ ಬಹಿರಂಗಪಡಿಸಿದೆ.
ನಾವೀಗ ಗಗನನೌಕೆಯೊಂದಿಗೆ ಸಂಪರ್ಕ ಹೊಂದಿಲ್ಲ. ಯಾವುದೇ ಮಾಹಿತಿಗಳನ್ನೂ ಸ್ವೀಕರಿಸುತ್ತಿಲ್ಲ. ಯಾವುದೇ ಆದೇಶಗಳನ್ನು ಕೂಡ ನಮಗೆ ನೀಡಲು ಸಾಧ್ಯವಾಗುತ್ತಿಲ್ಲ. ಗಗನನೌಕೆಗೆ ಏನಾಗಿದೆ ಎಂಬುದು ಕೂಡ ನಮಗೆ ತಿಳಿದಿಲ್ಲ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಿಂದ 40 ಕಿಲೋ ಮೀಟರ್ ದೂರದಲ್ಲಿರುವ ಬ್ಯಾಲಾಳು ಎಂಬಲ್ಲಿರುವ ಡೀಪ್ ಸ್ಪೇಸ್ ನೆಟ್‌ವರ್ಕ್ (ಡಿಎಸ್‌ಎನ್)ನಲ್ಲಿ ಶನಿವಾರ ಮುಂಜಾನೆ 1.30 ಹೊತ್ತಿಗೆ ನೌಕೆಯಿಂದ ನಾವು ಸಂಪರ್ಕ ಕಳೆದುಕೊಂಡಿದ್ದೇವೆ. ರಾತ್ರಿ 12.25ರವರೆಗೆ ನಾವು ಕಕ್ಷೆಯಲ್ಲಿನ ಗಗನನೌಕೆಯಿಂದ ಮಾಹಿತಿಗಳನ್ನು ಸ್ವೀಕರಿಸಿದ್ದೆವು ಎಂದು ಭಾರತೀಯ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ಇಸ್ರೋ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದೀಗ ಗಗನನೌಕೆಯ ಉಪ ವ್ಯವಸ್ಥೆಗಳ ಸ್ಥಿತಿ-ಗತಿಯನ್ನು ಅರಿತುಕೊಳ್ಳಲು ಬಾಹ್ಯಾಕಾಶ ವಿಜ್ಞಾನಿಗಳು ಟೆಲಿಮೆಟ್ರಿ ಡಾಟಾವನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಇಸ್ರೋ ವಿವರಣೆ ನೀಡಿದೆ.
ಚೆನ್ನೈಯಿಂದ 90 ಕಿಲೋ ಮೀಟರ್ ದೂರದಲ್ಲಿರುವ ಭಾರತದ ಏಕೈಕ ಉಪಗ್ರಹ ಉಡ್ಡಯನ ಕೇಂದ್ರ ಶ್ರೀಹರಿಕೋಟಾದಿಂದ 2008ರ ಅಕ್ಟೋಬರ್ 22ರಂದು ಪಿಎಸ್‌ಎಲ್‌ವಿ ಮೂಲಕ ಚಂದ್ರಯಾನಂ ಗಗನನೌಕೆಯನ್ನು ಉಡ್ಡಯನ ಮಾಡಲಾಗಿತ್ತು.
ಗಗನನೌಕೆಯು ಕಕ್ಷೆಯಲ್ಲಿ 312 ದಿನಗಳನ್ನು ಪೂರ್ತಿಗೊಳಿಸಿದ್ದು, 3,400ಕ್ಕಿಂತಲೂ ಹೆಚ್ಚು ಸಲ ಚಂದ್ರನ ಕಕ್ಷೆಯನ್ನು ಸುತ್ತಿದೆ. ಅಲ್ಲದೆ ವಿಶೇಷ ಕ್ಯಾಮರಾಗಳನ್ನು ಹೊಂದಿರುವ ಸೆನ್ಸಾರ್‌ಗಳಿಂದ ಅಗಾಧ ಮಾಹಿತಿಯನ್ನು ಕೂಡ 'ಚಂದ್ರಯಾನ' ರವಾನಿಸಿತ್ತು ಎಂದು ಇಸ್ರೋ ತಿಳಿಸಿದೆ.
ಇತ್ತೀಚೆಗಷ್ಟೇ ಸೆನ್ಸಾರ್ ಕಳೆದುಕೊಂಡಿತ್ತು.. ಚಂದ್ರಯಾನ ನೌಕೆ ಜೂನ್-ಜುಲೈ ಅವಧಿಯಲ್ಲಿ ಪ್ರಮುಖ ಸೆನ್ಸಾರ್ ಕಳೆದುಕೊಂಡಿದ್ದು ಇತ್ತೀಚೆಗೆ ವರದಿಯಾಗಿತ್ತು. ಇದರ ಅಕಾಲಿಕ ಅಂತ್ಯ ಕಾಣುವ ಭೀತಿ ಹುಟ್ಟಿದ್ದ ಬೆನ್ನಿಗೆ, ಅದನ್ನು ವಿಜ್ಞಾನಿಗಳು ಸಂರಕ್ಷಿಸುವಲ್ಲಿ ಸಫಲರಾಗಿದ್ದರು ಎಂದೂ ಹೇಳಲಾಗಿತ್ತು.
ಸ್ಟಾರ್ ಸೆನ್ಸಾರ್‌ನಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅನ್ಯ ತಂತ್ರಜ್ಞಾನ ಬಳಸಿ ಉಪಗ್ರಹವು 'ಚಂದ್ರನತ್ತ ದೃಷ್ಟಿ' ಇರಿಸುವುದನ್ನು ನೋಡಿಕೊಳ್ಳುವಂತೆ ವಿಜ್ಞಾನಿಗಳು ಸಫಲರಾಗಿದ್ದಾರೆ. ಕಕ್ಷೆಯನ್ನು 200 ಕಿ.ಮೀ.ಗಳಷ್ಟು ಏರಿಸಲಾಗಿದ್ದು, ತತ್ಪರಿಣಾಮವಾಗಿ, ಕಾರ್ಯಾಚರಣೆಯು ಸುರಕ್ಷಿತವಾಗಿದೆ ಮತ್ತು ಎಲ್ಲ ಸಿಸ್ಟಮ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೋ ವಕ್ತಾರ ಎಸ್. ಸತೀಶ್ ಆಗ ಪ್ರತಿಕ್ರಿಯೆ ನೀಡಿದ್ದರು.
ಆದರೂ ಸಂಪೂರ್ಣ ಭರವಸೆಯನ್ನು ನೀಡಿರದ ಅವರು, 'ಅದನ್ನು ಉಳಿಸಿಕೊಳ್ಳಲು ನಮಗೆ ಎಷ್ಟು ಸಮಯದವರೆಗೆ ಸಾಧ್ಯವಾಗಬಹುದು ಎಂಬ ಬಗ್ಗೆ ನಮ್ಮಲ್ಲಿ ಖಚಿತತೆಯಿಲ್ಲ. ಇನ್ನಷ್ಟು ಸಮಸ್ಯೆಗಳು ಕಾಣಿಸಿಕೊಂಡಲ್ಲಿ, ಚಂದ್ರಯಾನ-Iರ ಎರಡು ವರ್ಷಗಳ ಜೀವಿತಾವಧಿಯು ಬಹುಶಃ ಕಡಿಮೆಯಾಗಬಹುದು' ಎಂದು ಹೇಳಿದ್ದರು.