ಇನ್ನು ಖಾಸಗಿ ರೇಡಿಯೋ ಕೇಂದ್ರಗಳು ಕೂಡ ಸುದ್ದಿ ಪ್ರಸಾರ ಮಾಡಲಿವೆಯೇ? ಹೌದು, ಸರಕಾರವೇನಾದರೂ ಖಾಸಗಿ ರೇಡಿಯೋ ವಾಹಿನಿಗಳ ಕರೆಗೆ ಓಗೊಟ್ಟಲ್ಲಿ ಪಿಟಿಐ ಮತ್ತು ಯುಎನ್‌ಐ ಮುಂತಾದ ಸುದ್ದಿ ಸಂಸ್ಥೆಗಳನ್ನು ಆಧರಿಸಿ ಎಫ್‌ಎಂ ಕೇಂದ್ರಗಳು ಕ್ಷಣ-ಕ್ಷಣದ ಸುದ್ದಿಗಳನ್ನು ಬಿತ್ತರಿಸಲಿವೆ.
ಸುದ್ದಿ ಪ್ರಸಾರಕ್ಕೂ ಅವಕಾಶ ನೀಡಬೇಕೆಂದು ಎಫ್‌ಎಂ ರೇಡಿಯೋಗಳು ಕಳೆದ ಹಲವಾರು ಸಮಯದಿಂದ ಸರಕಾರದ ಮುಂದೆ ತಮ್ಮ ಬೇಡಿಕೆಯನ್ನಿಟ್ಟಿವೆ. ಇದೀಗ ಸರಕಾರ ಅದನ್ನು ಪರಿಶೀಲಿಸುತ್ತಿರುವ ಕಾರಣ ಎಫ್‌ಎಂ ರೇಡಿಯೋಗಳು ಪುಳಕಿತಗೊಂಡಿವೆ.
'ಈ ವಿಚಾರ ಪರಿಶೀಲನೆಯಲ್ಲಿದೆ' ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದದ ಅಧಿಕಾರಿಗಳು ತಿಳಿಸಿದ್ದಾರೆ.
ಎಫ್ಎಂ ರೇಡಿಯೋ ಕೇಂದ್ರಗಳ ಮೂರನೇ ಹಂತದ ಬಿಡ್ಡಿಂಗ್ ಸಂದರ್ಭದಲ್ಲಿ ಸಚಿವಾಲಯವು ಎಫ್‌ಎಂ ರೇಡಿಯೋ ಕೇಂದ್ರಗಳ ಬೇಡಿಕೆಯನ್ನು ಈಡೇರಿಸುವ ಸಾಧ್ಯತೆಗಳು ಎದ್ದು ಕಾಣುತ್ತಿದೆ.
ಎರಡನೇ ಹಂತದ ಎಫ್‌ಎಂ ರೇಡಿಯೋ ಬಿಡ್ಡಿಂಗ್‌ನಲ್ಲಿ ಎದುರಾಗಿದ್ದ ಹಣಕಾಸು ಸಮಸ್ಯೆಗಳು ಮತ್ತು ರಾಯಧನ ವಿವಾದಗಳು ಪರಿಹಾರ ಕಂಡ ತಕ್ಷಣ ಮೂರನೇ ಹಂತದ ಎಫ್‌ಎಂ ರೇಡಿಯೋ ಬಿಡ್ಡಿಂಗ್ ಕಾರ್ಯಕ್ಕೆ ಸರಕಾರ ಮುಂದಾಗಲಿದೆ.
ಪ್ರಸಕ್ತ ದೇಶದಲ್ಲಿ 100ಕ್ಕೂ ಹೆಚ್ಚು ಎಫ್‌ಎಂ ರೇಡಿಯೋ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಹೊಸ ವಾಹಿನಿಗಳಿಗಾಗಿ ಹಲವು ಖಾಸಗಿ ಕಂಪನಿಗಳು ಸರಕಾರಕ್ಕೆ ಅರ್ಜಿ ಗುಜರಾಯಿಸಿದ್ದು, ಪರವಾನಗಿಗಾಗಿ ಕಾಯುತ್ತಿವೆ.
ಈಗಿರುವ ನಿಯಮಾವಳಿಗಳ ಪ್ರಕಾರ ಸರಕಾರಿ ರೇಡಿಯೋ ಕೇಂದ್ರಗಳು ಮಾತ್ರ ಸುದ್ದಿ ಪ್ರಸಾರಕ್ಕೆ ಅನುಮತಿ ಪಡೆದುಕೊಂಡಿವೆ. ಸರಕಾರವು ಖಾಸಗಿಯವರಿಗೂ ಈ ಅವಕಾಶವನ್ನು ನೀಡಿದಲ್ಲಿ, ಪೈಪೋಟಿ ಹೆಚ್ಚಲಿದ್ದು ಬಳಕೆದಾರರಿಗೆ ಗುಣಮಟ್ಟದ ಸೇವೆ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.