ಸ್ಯಾಮ್‌ಸಂಗ್‌ನಿಂದ ಮುಕ್ತ ಸಿಡಿಎಂಎ ಹ್ಯಾಂಡ್‌ಸೆಟ್ ಕ್ರಾಂತಿ
ಕೊಲ್ಕತ್ತಾ, ಶನಿವಾರ, 29 ಆಗಸ್ಟ್ 2009( 17:46 IST )
ಸಿಡಿಎಂಎ ಕ್ಷೇತ್ರದ ಪ್ರಮುಖ ಸಂಸ್ಥೆ ಸ್ಯಾಮ್‌ಸಂಗ್ 'ಎಂಪವರ್ 699' ಎಂಬ ಹ್ಯಾಂಡ್‍ಸೆಟ್‌ನ್ನು ಮಾರುಕಟ್ಟೆಗೆ ಬಿಟ್ಟಿದ್ದು, ವಿಶ್ವದಲ್ಲೇ ಮುಕ್ತ ಮಾರುಕಟ್ಟೆ ಸಿಡಿಎಂಎ ಹ್ಯಾಂಡ್‌ಸೆಟ್ ಬಿಡುಗಡೆ ಮಾಡಿದ ಮೊತ್ತ ಮೊದಲ ಸಂಸ್ಥೆ ಎಂಬ ಕೀರ್ತಿಗೆ ಪಾತ್ರವಾಗಿದೆ.
ಡಿಜಿಟಲ್ ನಿಸ್ತಂತು ಸಂಪರ್ಕ ಸಾಧನಗಳ ತಯಾರಿಕಾ ಸಂಸ್ಥೆ 'ಕ್ವಾಲ್ಕಮ್' ಜತೆ ಸೇರಿಕೊಂಡು ಸ್ಯಾಮ್‌ಸಂಗ್ 'ಎಂಪವರ್ 699' ಸಿಡಿಎಂಎ ಮೊಬೈಲ್ ಹ್ಯಾಂಡ್‌ಸೆಟ್ ಬಿಡುಗಡೆ ಮಾಡಿದೆ.
PR
ಈ ಮೊಬೈಲ್ ಹ್ಯಾಂಡ್‌ಸೆಟ್‌ನಲ್ಲಿ ಯಾವುದೇ ಸೇವಾದಾರ ಸಂಸ್ಥೆಯ ಸಿಡಿಎಂಎ ಸಿಮ್ ಬಳಸಬಹುದಾಗಿದೆ. ಅದಕ್ಕೆ ಅಗತ್ಯವಿರುವ ತಂತ್ರಜ್ಞಾನವನ್ನು ಎಂಪವರ್ 699 ಸೆಟ್ ಒಳಗೊಂಡಿದೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ಮುಖ್ಯಸ್ಥ ಸುನಿಲ್ ದತ್ ತಿಳಿಸಿದ್ದಾರೆ.
ಸ್ಲೈಡರ್ ರೀತಿಯಲ್ಲಿರುವ ಈ ಮೊಬೈಲ್ ಹ್ಯಾಂಡ್ ಸೆಟ್ 1.3 ಎಂಪಿ ಕ್ಯಾಮರಾ ಮತ್ತು ವೀಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಮ್ಯೂಸಿಕ್ ಪ್ಲೇಯರ್, ವೀಡಿಯೋ ಪ್ಲೇಯರ್, ಎಫ್‌ಎಂ ರೇಡಿಯೋ, ಮೊಬೈಲ್ ಟ್ರಾಕರ್ ಮತ್ತು ಮೈಕ್ರೋ ಎಸ್‌ಡಿ ಕಾರ್ಡ್‌ಗೆ ಬೆಂಬಲಿಸುವ ಈ ಸೆಟ್ ಬೆಲೆ 7,000 ರೂಪಾಯಿಗಳು.
ಪ್ರಸಕ್ತ 100 ಮಿಲಿಯನ್ ಸಿಡಿಎಂಎ ಚಂದಾದಾರರು ಇದ್ದು, ಮುಕ್ತ ಹ್ಯಾಂಡ್‌ಸೆಟ್‌ನಿಂದಾಗಿ ಸಿಡಿಎಂಎ ಸಂಖ್ಯೆ ಭಾರತದಲ್ಲಿ ಹೆಚ್ಚಾಗುವ ನಿರೀಕ್ಷೆ ನಮ್ಮದು ಎಂದು ಸಂಸ್ಥೆ ತಿಳಿಸಿದೆ.
ಮುಕ್ತ ಹ್ಯಾಡ್‌ಸೆಟ್ ಮಾರುಕಟ್ಟೆಗೆ ತಂದ ವಿಶ್ವದ ಮೊತ್ತ ಮೊದಲ ಸಂಸ್ಥೆ ನಮ್ಮದು. ಈ ಹ್ಯಾಂಡ್‌ಸೆಟ್‌ನಲ್ಲಿ ಯಾವುದೇ ಸಿಡಿಎಂಎ ಮೊಬೈಲ್ ಸೇವಾದಾರರ ಸಂಪರ್ಕದ ಸಿಮ್‌ನ್ನು ಬಳಸಬಹುದು. ಇಲ್ಲಿ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಕ್ವಾಲ್ಕಮ್ ಉಪಾಧ್ಯಕ್ಷ ಕನ್ವಾಲಿಂದರ್ ಸಿಂಗ್ ತಿಳಿಸಿದ್ದಾರೆ.