ವಿದೇಶದಲ್ಲಿ ಸುರಕ್ಷಿತ ಸ್ವರ್ಗದಲ್ಲಿರುವ ಭಾರತದ ಅಕ್ರಮ ಹಣವನ್ನು ವಾಪಸು ತರುವುದು ದೃಢವಾದ ಇಚ್ಛಾಶಕ್ತಿಯಿಂದ ಮಾತ್ರ ಸಾಧ್ಯವೆಂದು ಹಣಕಾಸು ಮತ್ತು ಬಂಡವಾಳ ಪೇಟೆಯ ತಜ್ಞ ಪ್ರೊ. ಆರ್. ವೈದ್ಯನಾಥನ್ ತಿಳಿಸಿದ್ದಾರೆ. ತಾವು ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಠೇವಣಿಯಿಟ್ಟಿಲ್ಲವೆಂದು ರಾಜಕಾರಣಿಗಳು ಘೋಷಿಸುವುದು ಸೇರಿದಂತೆ ಕೆಲವು ಕ್ರಮಗಳನ್ನು ಕಡ್ಡಾಯ ಮಾಡುವುದರಿಂದ ಈ ವಿಷಯ ನಿಭಾಯಿಸಬಹುದೆಂದು ಅವರು ಹೇಳಿದರು.
ಭಾರತೀಯರಿಗೆ ಸೇರಿದ 500 ಶತಕೋಟಿ ಡಾಲರ್‌ನಿಂದ ಹಿಡಿದು 1.4 ಟ್ರಿಲಿಯನ್ ಡಾಲರ್ ಹಣವನ್ನು ವಿದೇಶದಲ್ಲಿ ಸುರಕ್ಷಿತ ತಾಣಗಳಲ್ಲಿ ವಿಶೇಷವಾಗಿ ಸ್ವಿಸ್ ಬ್ಯಾಂಕ್‌ಗಳನ್ನು ಇಡಲಾಗಿದೆ. 1.4 ಟ್ರಿಲಿಯನ್ ಡಾಲರ್ ಹಣವು 70 ಲಕ್ಷ ಕೋಟಿ ರೂ.ಗೆ ಸಮಾನವಾಗಿದ್ದು, 50 ಲಕ್ಷ ಕೋಟಿ ರಾಷ್ಟ್ರೀಯ ಆದಾಯಕ್ಕಿಂತ ಹೆಚ್ಚಾಗಿದೆಯೆಂದು 'ತೆರಿಗೆ ಸ್ವರ್ಗಗಳು ಮತ್ತು ಭಾರತದ ಅಕ್ರಮ ಆಸ್ತಿ' ಕುರಿತ ನಾನಿ ಪಾಲ್ಖಿವಾಲಾ ಸ್ಮಾರಕ ಉಪನ್ಯಾಸ ನೀಡುತ್ತಾ ವೈದ್ಯನಾಥನ್ ತಿಳಿಸಿದ್ದಾರೆ.
ಸ್ವಿಸ್ ಸರ್ಕಾರವು ಗ್ರಾಹಕರ ಖಾತೆ ವಿವರಗಳನ್ನು ನಿರ್ದಿಷ್ಟ ಪ್ರಕರಣ ಹೊರತು ಪಡಿಸಿ ಬಹಿರಂಗಪಡಿಸುವುದಿಲ್ಲವೆಂದು ಹೇಳಿರುವ ಬಗ್ಗೆ ಗಮನಸೆಳೆದ ಅವರು, ಕಪ್ಪು ಹಣವನ್ನು ಹೊರತೆಗೆಯಲು ಬಹುಮುಖದ ವೇದಿಕೆ ಮೂಲಕ ಕೇಂದ್ರ ಸರ್ಕಾರ ಪ್ರಸ್ತಾಪಿಸಬೇಕು ಎಂದು ಹೇಳಿದರು.