ಉತ್ಪಾದನಾ ವಲಯ ಮತ್ತು ಹೊಟೇಲ್‌ಗಳಂತಹ ಸೇವೆಗಳ ಮೇಲೆ ಜಾಗತಿಕ ಹಿಂಜರಿತದ ದುಷ್ಪರಿಣಾಮ ಬೀರಿರುವ ಹೊರತಾಗಿಯೂ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಭಾರತೀಯ ಅರ್ಥ ವ್ಯವಸ್ಥೆ ಚೇತರಿಕೆ ಕಂಡಿದ್ದು, ಶೇ.6.1ರ ಆರ್ಥಿಕ ಪ್ರಗತಿ ಸಾಧಿಸಿದೆ.
ಈ ಹಿಂದಿನ ತ್ರೈಮಾಸಿಕ ಅವಧಿಯಲ್ಲಿ ಶೇ.5.8ರ ಒಟ್ಟು ದೇಶೀಯ ಉತ್ಪಾದನೆ ಪ್ರಗತಿ ದರ ದಾಖಲಿಸಿದ್ದ ಭಾರತವು, 2009ರ ಏಪ್ರಿಲ್-ಜೂನ್ ಅವಧಿಯಲ್ಲಿ ಶೇ.6.1ನ್ನು ತಲುಪಿದ್ದು, ಸಕಾರಾತ್ಮಕ ಪ್ರಗತಿಯನ್ನು ಕಂಡಿದೆ. ಪ್ರಸಕ್ತ ಪ್ರಗತಿ ದರವನ್ನು ಈ ಹಿಂದಿನ ವರ್ಷದ ಇದೇ ಅವಧಿಯ ಪ್ರಗತಿಗೆ ಹೋಲಿಸಿದರೆ ಹಿನ್ನಡೆಯನ್ನು ಕಾಣಬಹುದಾಗಿದೆ. ಕಳೆದ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತ ಶೇ.7.8ರ ಪ್ರಗತಿ ದರ ಹೊಂದಿತ್ತು.
ಭಾರತೀಯ ಅರ್ಥವ್ಯವಸ್ಥೆಯನ್ನು ಶೇ.6ಕ್ಕಿಂತ ಹೆಚ್ಚಿನ ಪ್ರಗತಿಯಲ್ಲೇ ಮುಂದುವರಿಸಿಕೊಂಡು ಹೋಗಲು ರಿಸರ್ವ್ ಬ್ಯಾಂಕ್ ಮತ್ತು ಸರಕಾರ ಪ್ರಯತ್ನ ನಡೆಸುತ್ತಿದೆ. ಕೃಷ್ಯುತ್ಪನ್ನ ಪ್ರಗತಿ ದರದಲ್ಲಿ ಕುಸಿತವಾಗದಿದ್ದರೆ, ಇದೇ ಸ್ಥಿತಿಯನ್ನು ಮುಂದುವರಿಸಲು ಸಾಧ್ಯವಾದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯವಾಗಬಹುದು.
ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿನ ಗಣಿಗಾರಿಕೆ ಮತ್ತು ವಿದ್ಯುತ್‌ಚಕ್ತಿ ವಲಯ ಹಾಗೂ ಸೇವಾ ಕ್ಷೇತ್ರದಲ್ಲಿ ಫೈನಾನ್ಸಿಂಗ್ ವಲಯವು ಕ್ರಮವಾಗಿ ಶೇ.7.9, 6.2 ಹಾಗೂ 8.1 ಪ್ರಗತಿ ದರವನ್ನು ದಾಖಲಿಸಿವೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ.4.6, 2.7 ಮತ್ತು 6.9ರ ಪ್ರಗತಿ ದಾಖಲಿಸಿದ್ದವು.
ನಿರ್ಮಾಣ ಮತ್ತು ಸಂಪರ್ಕ ಸೇವೆಗಳು ಶೇ.7.1 ಹಾಗೂ 6.8ರ ಪ್ರಗತಿ ದರವನ್ನು ದಾಖಲಿಸಿವೆ. ಇದು ಈ ಹಿಂದಿನ ವರ್ಷದಲ್ಲಿ ಶೇ.8.4 ಹಾಗೂ ಶೇ.8.2 ಆಗಿತ್ತು.
ಆದರೆ ಕೃಷಿ ಮತ್ತು ಉತ್ಪಾದನಾ ಕ್ಷೇತ್ರವು ಕುಸಿತ ಕಂಡಿದೆ. ಕಳೆದ ವರ್ಷದ ಇದೇ ಅವಧಿಲ್ಲಿ ಶೇ.3 ಮತ್ತು ಶೇ.5.5ರ ಪ್ರಗತಿಯು ಈ ಬಾರಿ ಶೇ.2.4 ಮತ್ತು ಶೇ.3.4ಕ್ಕೆ ಹಿನ್ನಡೆ ಕಂಡಿದೆ.
ಹೊಟೇಲುಗಳು, ವ್ಯಾಪಾರ, ಸರಕು ಸಾಗಣೆ ಮತ್ತು ಸಂಪರ್ಕ ಮಾಧ್ಯಮಗಳು ಮುಂತಾದ ಸೇವಾ ಕ್ಷೇತ್ರಗಳು ಕೂಡ ಕಳೆದ ವರ್ಷಕ್ಕಿಂತ ಭಾರೀ ಕುಸಿತ ಕಂಡಿವೆ. ಕಳೆದ ವರ್ಷ ಶೇ.13ರ ಪ್ರಗತಿ ಹೊಂದಿದ್ದ ಸೇವಾಕ್ಷೇತ್ರ ಈ ಬಾರಿ ಶೇ.8.1ಕ್ಕೆ ಕುಸಿತ ಕಂಡಿದೆ.