ಎರಡಂಕಿ ತಲುಪಿರುವ ಆಹಾರ ಪದಾರ್ಥಗಳ ಸಗಟು ಸೂಚ್ಯಂಕ ದರದಿಂದಾಗಿ ಹಣದುಬ್ಬರ ದರವನ್ನು ನಿಯಂತ್ರಿಸುವಲ್ಲಿ ತ್ರಾಸ ಪಡುತ್ತಿರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಒಪ್ಪಿಕೊಂಡಿದೆ.
ಆಹಾರ ವಸ್ತುಗಳ ದರ ಗಗನಕ್ಕೇರಿರುವುದರ ಬಗ್ಗೆ ಸೋಮವಾರ ಕಳವಳ ವ್ಯಕ್ತಪಡಿಸಿರುವ ಆರ್‌ಬಿಐ ಉಪ ಗವರ್ನರ್ ಕೆ.ಸಿ. ಚಕ್ರವರ್ತಿ, 'ಈಗಾಗಲೇ ಆಹಾರ ವಸ್ತುಗಳ ಸಗಟು ಸೂಚ್ಯಂಕವು ಶೇ.10ರಲ್ಲಿದೆ. ಈ ದರವನ್ನು ಕಡಿಮೆ ಮಾಡುವುದೇ ನಮ್ಮೆದುರು ಇರುವ ಪ್ರಸಕ್ತ ಮಹತ್ವದ ಸವಾಲು' ಎಂದು ತಿಳಿಸಿದ್ದಾರೆ.
ಬ್ಯಾಂಕುಗಳ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, 'ಬರಗಾಲದಿಂದ ಹಿಡಿದು ಸರಕಾರದ ಸಾಲದ ಮೇಲಿನ ಬಡ್ಡಿದರದವರೆಗಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಪ್ರಸಕ್ತ ವರ್ಷ ದೇಶವು ಶೇ.6ಕ್ಕಿಂತ ಹೆಚ್ಚಿನ ಪ್ರಗತಿ ದಾಖಲಿಸಲಿದೆ' ಎಂದರು.
ಅದೇ ಹೊತ್ತಿಗೆ ಬರಗಾಲವು ಕೃಷ್ಯುತ್ಪನ್ನಗಳ ಮೇಲೆ ಪರಿಣಾಮ ಬೀರಿದಲ್ಲಿ ಇದು ಪ್ರಗತಿ ದರದಲ್ಲೂ ಕಾಣಿಸಿಕೊಳ್ಳಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬಡ್ಡಿದರದಲ್ಲಿ ಇನ್ನಷ್ಟು ಕಡಿತ ಸಾಧ್ಯತೆಗಳನ್ನು ತಳ್ಳಿ ಹಾಕಿದ ಅವರು, ಹಾಗೊಂದು ವೇಳೆ ಬರಗಾಲದಿಂದಾಗಿ ಹಣದುಬ್ಬರ ದರವು ನಿಯಂತ್ರಣ ತಪ್ಪಿ ಹೋದಲ್ಲಿ ಸೆಂಟ್ರಲ್ ಬ್ಯಾಂಕ್ ತನ್ನ ನೀತಿಯನ್ನು ಬದಲಾಯಿಸಿಕೊಳ್ಳುವ ಕುರಿತು ಯೋಚಿಸಲಿದೆ ಎಂದರು.