ಮದುವೆ ಸಮಾರಂಭಗಳ ಹಿನ್ನಲೆಯಲ್ಲಿ ಆಭರಣ ತಯಾರಕರಿಂದ ಖರೀದಿಗೆ ಬೇಡಿಕೆ ಹೆಚ್ಚಿದ ಕಾರಣ ಮತ್ತು ಪ್ರಬಲ ಜಾಗತಿಕ ನಡೆಯಿಂದಾಗಿ ಸೋಮವಾರ ಚಿನಿವಾರ ಪೇಟೆಯಲ್ಲಿ ಚಿನ್ನ ದರವು 30 ರೂಪಾಯಿಗಳ ಏರಿಕೆ ಕಂಡಿದ್ದು, ಪ್ರತಿ 10 ಗ್ರಾಂಗಳಿಗೆ 15,390 ರೂ.ಗಳನ್ನು ದಾಖಲಿಸಿದೆ.
ಆದರೆ ಇದರ ಲಾಭ ಬೆಳ್ಳಿ ವಲಯದಲ್ಲಾಗಿಲ್ಲ. ಕೈಗಾರಿಕಾ ಕ್ಷೇತ್ರದಿಂದ ಖರೀದಿಗೆ ಒಲವು ಕುಂಠಿತವಾಗಿದ್ದರಿಂದಾಗಿ 50 ರೂಪಾಯಿಗಳ ಕುಸಿತ ಕಂಡಿದ್ದು, ಪ್ರತೀ ಕೇಜಿಗೆ 23,850 ರೂಪಾಯಿಗಳಲ್ಲಿ ವ್ಯವಹಾರ ನಡೆಸಿದೆ.
ಡಾಲರುಗಳ ಮುಂದುವರಿದ ದುರ್ಬಲತೆಗಳಿಂದಾಗಿ ವಿದೇಶಿ ಮಾರುಕಟ್ಟೆಯಲ್ಲಿ ಲೋಹ ದರ ಪ್ರಬಲಗೊಂಡ ಕಾರಣ ದೇಶಿ ಮಾರುಕಟ್ಟೆಯಲ್ಲಿ ಖರೀದಿ ಹೆಚ್ಚಾಗಿತ್ತು. ಇದರಿಂದಾಗಿ ಚಿನ್ನ ದರವು ಹೆಚ್ಚಳ ದಾಖಲಿಸಿದೆ ಎಂದು ಮಾರುಕಟ್ಟೆ ಮಂದಿ ತಿಳಿಸಿದ್ದಾರೆ.
ಸಿಂಗಾಪುರದಲ್ಲಿ ಪ್ರತೀ ಔನ್ಸ್ ಚಿನ್ನ ದರವು ಶೇ.0.6ರ ಏರಿಕೆ ಕಂಡಿದ್ದು, 960.75 ಡಾಲರುಗಳನ್ನು ಮುಟ್ಟಿದೆ.
ಅಲ್ಲದೆ ಮುಂದಿನ ವಾರದಿಂದ ಮದುವೆ ಸಮಾರಂಭಗಳ ಅವಧಿ ಆರಂಭವಾಗಲಿರುವ ಹಿನ್ನಲೆಯಲ್ಲಿ ಚಿಲ್ಲರೆ ಮಾರಾಟಗಾರರು ಖರೀದಿಯಲ್ಲಿ ತೊಡಗಿದ್ದು ಕೂಡ ದುಬಾರಿ ಲೋಹದ ದರ ಹೆಚ್ಚಾಗಲು ಕಾರಣವಾಯಿತು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಉತ್ಕೃಷ್ಟ ಚಿನ್ನ ಮತ್ತು ಆಭರಣ ದರ ಪ್ರತೀ 10 ಗ್ರಾಂಗಳಲ್ಲಿ 30 ರೂಪಾಯಿಗಳಂತೆ ಏರಿಕೆ ದಾಖಲಿಸಿದ್ದು, ಕ್ರಮವಾಗಿ 15,390 ಹಾಗೂ 15,240 ರೂಪಾಯಿಗಳಲ್ಲಿ ವ್ಯವಹಾರ ನಡೆಸಿದೆ. ಆದರೆ ಪವನ್ ಚಿನ್ನದಲ್ಲಿ ಬದಲಾವಣೆ ಕಾಣದೆ 12,650 ರೂಪಾಯಿಗಳಲ್ಲೇ ಮುಂದುವರಿದಿದೆ.
ಬೆಳ್ಳಿಯಲ್ಲಿ 50 ರೂ.ಗಳ ಕುಸಿತ ದಾಖಲಾಗಿದ್ದು, ಪ್ರತೀ ಕೇಜಿ ಬೆಳ್ಳಿ ದರ 23,850 ರೂ. ವಾರವನ್ನಾಧರಿಸಿದ ಬೆಳ್ಳಿ ದರದಲ್ಲಿ 100 ರೂಪಾಯಿಗಳ ಹಿನ್ನಡೆ ಕಂಡು ಬಂದಿದೆ. ಇಲ್ಲಿ 23,660 ರೂಪಾಯಿಗಳಲ್ಲಿ ವ್ಯವಹಾರ ನಡೆದಿದೆ.
ಆದರೆ ಬೆಳ್ಳಿ ನಾಣ್ಯಗಳ ದರದಲ್ಲಿ 100 ರೂಪಾಯಿಗಳ ಹೆಚ್ಚಳವಾಗಿದೆ. ಪ್ರತೀ 100 ನಾಣ್ಯಗಳ ದರವು ಖರೀದಿಗೆ 30,300 ಹಾಗೂ 30,400 ರೂಪಾಯಿಗಳನ್ನು ಮಾರುಕಟ್ಟೆ ದಾಖಲಿಸಿದೆ.