ದೇಶದಲ್ಲಿನ 593 ಜಿಲ್ಲೆಗಳಲ್ಲಿ 278ನ್ನು ಬರಪೀಡಿತ ಎಂದು ಸರಕಾರ ಘೋಷಿಸಿದ್ದು, 11 ರಾಜ್ಯಗಳು ಅನಾವೃಷ್ಟಿಗೊಳಗಾಗಿರುವುದರಿಂದ ಸಕ್ಕರೆ ಮತ್ತು ಧಾನ್ಯಗಳ ಬೆಲೆಯೇ ಪ್ರಮುಖ ಕಳವಳಕಾರಿ ವಿಚಾರ ಎಂದಿದೆ.
ದೇಶದ ಶೇ.46ರಷ್ಟು ಭಾಗ ಬರಪೀಡಿತವಾಗಿರುವುದರಿಂದ ಆಹಾರ ವಸ್ತುಗಳ ಬೆಲೆ ಖಚಿತ. ಅದರಲ್ಲೂ ಸಕ್ಕರೆ ಮತ್ತು ಧಾನ್ಯಗಳ ಬೆಲೆಯ ಬಗ್ಗೆ ಹೆಚ್ಚು ಆತಂಕವಿದೆ ಎಂದು ಸರಕಾರ ತಿಳಿಸಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಸಕ್ಕರೆ ಬೆಲೆ ದ್ವಿಗುಣಗೊಂಡಿದ್ದು 35 ರೂಪಾಯಿಗಳನ್ನು ತಲುಪಿದೆ. ಧಾನ್ಯಗಳ ಬೆಲೆಯಂತೂ ಕಳೆದ ನಾಲ್ಕೇ ತಿಂಗಳಲ್ಲಿ ಶೇ.50ರಷ್ಟು ಏರಿಕೆ ಕಂಡಿದೆ.
ಆಗಸ್ಟ್ 27ರ ಹೊತ್ತಿಗೆ ದೇಶದ ಹಲವೆಡೆ ಶೇ.24ರಿಂದ 26ರಷ್ಟು ಮಳೆಯ ಅಭಾವ ಕಂಡು ಬಂದಿದ್ದು, ಪ್ರಸಕ್ತ ಸಾಲಿನ ಕೃಷ್ಯುತ್ಪನ್ನ ಭಾರೀ ಮಟ್ಟದಲ್ಲಿ ಕುಸಿತ ಕಾಣುವ ಭೀತಿಯನ್ನು ದೇಶ ಎದುರಿಸುತ್ತಿದೆ. ಅದಕ್ಕಾಗಿ ಸರಕಾರ ಹಲವು ಕ್ರಮಗಳ ಮೂಲಕ ಬೆಲೆಯೇರಿಕೆ ತಡೆಯಲು ಮುಂದಾಗಿದ್ದು, ಸಮಿತಿಗಳನ್ನೂ ರಚಿಸಿದೆ.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)ಯು ಬರಗಾಲವನ್ನು ನಿಯಂತ್ರಿಸುವ ಸಂಬಂಧ ಸಭೆ ಸೇರಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ. ಸಾಕಷ್ಟು ಧಾನ್ಯಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ, ಕೊರತೆ ಎದುರಾಗದು ಎಂದು ಈ ಸಮಿತಿ ವಿಶ್ವಾಸ ವ್ಯಕ್ತಪಡಿಸಿದೆ.
ಬರಗಾಲ ಮತ್ತು ಬೆಲೆಯೇರಿಕೆಯ ಸಂಬಂಧ ಅಧಿಕಾರಯುತ ಸಚಿವರ ಸಮೂಹ (ಇಜಿಓಎಂ) ಶೀಘ್ರದಲ್ಲೇ ಸಭೆ ಸೇರುವ ಸಾಧ್ಯತೆಗಳಿದ್ದು, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.