ವಿಶ್ವದ ಮೊತ್ತ ಮೊದಲ ದ್ವಿ-ಪರದೆ ಹೊಂದಿರುವ ಲ್ಯಾಪ್‌ಟಾಪನ್ನು ಅಮೆರಿಕಾದ ಅಲಸ್ಕಾ ಮೂಲದ ತಂತ್ರಜ್ಞಾನ ಸಂಸ್ಥೆ 'ಜಿ-ಸ್ಕ್ರೀನ್' ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಈ ಲ್ಯಾಪ್‌ಟಾಪ್‌ಗೆ 'ಜಿ-ಸ್ಕ್ರೀನ್ ಸ್ಪೇಸ್‌ಬುಕ್' ಎಂದು ನಾಮಕರಣ ಮಾಡಲಾಗಿದೆ. ಮುಂದುವರಿದ ತಂತ್ರಜ್ಞಾನವನ್ನು ಇದರಲ್ಲಿ ಬಳಕೆ ಮಾಡಲಾಗುತ್ತಿದ್ದು, ಎರಡೆರಡು ಕಾರ್ಯಗಳನ್ನು ಒಂದೇ ಸಮಯದಲ್ಲಿ ಸುಲಭವಾಗಿ ನಿರ್ವಹಿಸಬಹುದಾಗಿದೆ.
PR
15.4 ಇಂಚಿನ ಎರಡು ಪರದೆಗಳು ಈ ಲ್ಯಾಪ್‌ಟಾಪ್‌ನಲ್ಲಿರುತ್ತವೆ. ಎರಡೂ ಪರದೆಗಳು ಒಂದೇ ಕಡೆ ಒತ್ತೊತ್ತಾಗಿರುತ್ತವೆ. ಬೇಕೆಂದಾದರೆ ಮತ್ತೊಂದು ಪರದೆಯನ್ನು ಬಿಡಿಸಿಕೊಳ್ಳಬಹುದಾದ ವ್ಯವಸ್ಥೆಯನ್ನು ಇದರಲ್ಲಿ ರೂಪಿಸಲಾಗಿದೆ.
ಈ ಲ್ಯಾಪ್‌ಟಾಪ್ ಬೆಲೆ ಅಂದಾಜು 1.5 ಲಕ್ಷ. ಎರಡೆರಡು ಪರದೆಗಳಿರುವುದರಿಂದ ಬ್ಯಾಟರಿ ಬಾಳ್ವಿಕೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಅಲ್ಲದೆ ಲ್ಯಾಪ್‌ಟಾಪ್ ತೂಕದ ಕುರಿತೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಕಂಪನಿ ಭರವಸೆ ನೀಡಿದೆ.
ಹೆಚ್ಚುವರಿ ಪರದೆಯ ಅಗತ್ಯ ಕನಿಷ್ಠ ಪ್ರಮಾಣದಲ್ಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾವು ಈ ಲ್ಯಾಪ್‌ಟಾಪ್ ತಯಾರಿಸುತ್ತಿದ್ದೇವೆ ಎಂದು ಜಿ-ಸ್ಕ್ರೀನ್ ಸಂಸ್ಥಾಪಕ ಗಾರ್ಡನ್ ಸ್ಟೀವರ್ಟ್ ತಿಳಿಸಿದ್ದಾರೆ.
ಡಿಸೆಂಬರ್ ಹೊತ್ತಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಈ ಲ್ಯಾಪ್‌ಟಾಪ್, ಒಂದೇ ಅಳತೆಯ ಎರಡು ಪರದೆಗಳನ್ನು ಒಂದೇ ಲ್ಯಾಪ್‌ಟಾಪ್‌ನಲ್ಲಿ ಹೊಂದಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಈ ಲ್ಯಾಪ್‌ಟಾಪ್ ವಿಂಡೋಸ್ ವಿಸ್ತಾ ಅಥವಾ ವಿಂಡೋಸ್ ಎಕ್ಸ್‌ಪಿಯಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿರುತ್ತದೆ. ಇಂಟೆಲ್ ಕೋರ್ 2 ಡುಯೋ ಪಿ8400, 2.26-ಜಿಎಚ್‌ಜೆಡ್, 4 ಜಿಬಿ ರ‌್ಯಾಮ್, 320 ಜಿಬಿ ಹಾರ್ಡ್‌ಡಿಸ್ಕ್, 9 ಸೆಲ್ ಬ್ಯಾಟರಿ, ಗ್ರಾಫಿಕ್ಸ್ ಕಾರ್ಡ್ ಮುಂತಾದ ವ್ಯವಸ್ಥೆಗಳನ್ನು ಹೊಂದಿದೆ.