ಆಗಸ್ಟ್‌ನಲ್ಲಿ ಶೇ.42ರ ಏರಿಕೆ ಕಂಡ ಮಾರುತಿ ಸುಜುಕಿ
ನವದೆಹಲಿ, ಮಂಗಳವಾರ, 1 ಸೆಪ್ಟೆಂಬರ್ 2009( 15:50 IST )
ಆಗಸ್ಟ್ ತಿಂಗಳಲ್ಲಿ 84,808 ವಾಹನಗಳನ್ನು ಮಾರಾಟ ಮಾಡುವ ಮೂಲಕ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಶೇ.41.56ರ ಏರಿಕೆಯನ್ನು ದಾಖಲಿಸಿದೆ ಎಂದು ಮಂಗಳವಾರ ತಿಳಿಸಿದೆ.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 54,113 ವಾಹನಗಳನ್ನು ಮಾರಿದ್ದ ಮಾರುತಿ, ಪ್ರಸಕ್ತ ವರ್ಷದ ಅದೇ ತಿಂಗಳಲ್ಲಿ ಶೇ.29.29ರ ಏರಿಕೆ ಕಂಡಿದ್ದು, 69,961 ವಾಹನಗಳನ್ನು ಮಾರಾಟ ಮಾಡಿದೆ.
ಅದೇ ಹೊತ್ತಿಗೆ ರಫ್ತು ಪ್ರಮಾಣವು ಎರಡು ಪಟ್ಟಿಗಿಂತಲೂ ಹೆಚ್ಚಿನ ಪ್ರಗತಿ ಸಾಧಿಸಿದೆ. ವರ್ಷದ ಹಿಂದೆ 5,795 ವಾಹನಗಳನ್ನು ಮಾತ್ರ ರಫ್ತು ಮಾಡಲಾಗಿದ್ದರೆ, ಈ ವರ್ಷ ಅದು 14,847 ವಾಹನಗಳನ್ನು ರಫ್ತು ಮಾಡಿದೆ.
ಈ ವರ್ಷದ ಜನವರಿಯಲ್ಲಿ ಬಿಡುಗಡೆ ಮಾಡಿದ್ದ 'ಎ-ಸ್ಟಾರ್' ಸೇರಿದಂತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 50,000ಕ್ಕೂ ಹೆಚ್ಚು ವಾಹನಗಳನ್ನು ರಫ್ತು ಮಾಡಿದ ಹೆಗ್ಗಳಿಕೆ ಮಾರುತಿ ಸುಜುಕಿಯದ್ದು ಎಂದು ಸಂಸ್ಥೆ ಹೇಳಿಕೊಂಡಿದೆ.
ಮಾರುತಿ ಸುಜುಕಿ ಸಂಸ್ಥೆಯ ಒಂದು ಕಾಲದ ಬಿಸಿ ಬಿಸಿ ದೋಸೆ ಎನಿಸಿಕೊಂಡಿದ್ದ ಎಂ800 ಕಾರಿಗೆ ಬೇಡಿಕೆ ಕಡಿಮೆಯಾಗಿರುವುದು ಕೂಡ ಪ್ರಸಕ್ತ ತಿಂಗಳಲ್ಲಿ ದಾಖಲಾಗಿದೆ. ಶೇ.26.45ರ ಮಾರಾಟ ಕುಸಿತ ಕಂಡಿರುವ 800 ಕಾರು, ಕಳೆದ ವರ್ಷದಲ್ಲಿ ಮಾರಿದ್ದ 3,717ರ ಬದಲಿಗೆ ಈ ಆಗಸ್ಟ್‌ನಲ್ಲಿ 2,734 ವಾಹನಗಳನ್ನು ಮಾತ್ರ ಮಾರುವಲ್ಲಿ ಯಶ ಕಂಡಿದೆ.
ಆದರೆ ಆಲ್ಟೋ, ವಾಗನ್ ಆರ್, ಎಸ್ಟಿಲೋ, ಸ್ವಿಫ್ಟ್, ಎ-ಸ್ಟಾರ್ ಮತ್ತು ರಿಟ್ಜ್‌ಗಳಲ್ಲಿ ಭಾರೀ ಏರಿಕೆ ದಾಖಲಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಕೇವಲ 37,667 ವಾಹನಗಳನ್ನು ಮಾರಾಟ ಮಾಡಿದ್ದ ಎ2 ಸೆಜಮೆಂಟ್ ಈ ಬಾಿ 52,473 ವಾಹನಗಳನ್ನು ಹಸ್ತಾಂತರಿಸುವುದರೊಂದಿಗೆ ಶೇ.39.31ರ ಏರಿಕೆ ಕಂಡಿದೆ.
ಎ3 ವಿಭಾಗದ ಮಾರುಕಟ್ಟೆಯಲ್ಲಿ (ಎಸ್‌ಎಕ್ಸ್4, ಡಿಜೈರ್) ಶೇ.44.11ರ ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 5,427 ವಾಹನಗಳು ಮಾರಾಟವಾಗಿದ್ದರೆ, ಪ್ರಸಕ್ತ ಅವಧಿಯಲ್ಲಿ 7,821 ವಾಹನಗಳನ್ನು ಮಾರಾಟ ಮಾಡಲಾಗಿದೆ.
ಎಂಎಸ್‌ಐ ಪ್ರಯಾಣಿಕರ ಕಾರು ಮಾರಾಟದಲ್ಲಿ ಶೇ.30.51ರ ಏರಿಕೆಯಾಗಿದೆ. 2008ರ ಆಗಸ್ಟ್ ತಿಂಗಳಲ್ಲಿ 53,351 ಕಾರುಗಳನ್ನು ಮಾರಾಟ ಮಾಡಲಾಗಿತ್ತು. ಈ ಬಾರಿ ಅದು 69,629ಕ್ಕೆ ಏರಿಕೆ ಕಂಡಿದೆ.