ಏರ್‌ಸೆಲ್ ಖಾಸಗಿ ದೂರವಾಣಿ ಸಂಸ್ಥೆಯೊಂದಿಗೆ ಟವರ್ ಹಂಚಿಕೆ ಒಪ್ಪಂದ ಮಾಡಿಕೊಳ್ಳಲಿರುವ ಭಾರತದ ಎರಡನೇ ಅತಿ ದೊಡ್ಡ ದೂರವಾಣಿ ಸಂಸ್ಥೆ ರಿಲಯೆನ್ಸ್ ಕಮ್ಯುನಿಕೇಷನ್ಸ್, ಮುಂದಿನ 10 ವರ್ಷಗಳಲ್ಲಿ 300 ಮಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಆದಾಯ ಪಡೆದುಕೊಳ್ಳಲಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಶೇರು ಮಾರುಕಟ್ಟೆ ಪಟ್ಟಿಯಲ್ಲಿಲ್ಲದ ಏರ್‌ಸೆಲ್ ಮುಂದಿನ ಎರಡು ದಿನಗಳಲ್ಲಿ ದಾಖಲೆ ಪತ್ರ ಸಿದ್ಧವಾದ ನಂತರ ಈ ಬಗ್ಗೆ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ ಎಂದು ಉದ್ಯಮದ ಬೆಳವಣಿಗೆಯನ್ನು ಹತ್ತಿರದಿಂದ ವೀಕ್ಷಿಸುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟವರ್‌ಗಳನ್ನು ಹಂಚಿಕೊಳ್ಳುವುದು, ವಾಯ್ಸ್ ಕ್ಯಾರಿಜೇಯ್, ಬಲ್ಕ್ ಬ್ಯಾಂಡ್‌ವಿಡ್ತ್ ಮುಂತಾದ ಪ್ರಮುಖ ವಿಚಾರಗಳು ಒಪ್ಪಂದಗಳಲ್ಲಿ ಜಾಗ ಪಡೆಯಲಿವೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಮಲೇಷಿಯಾದ 'ಮ್ಯಾಕ್ಸಿಸ್' ಸಂಸ್ಥೆ ಬೃಹತ್ ಪಾಲು ಹೊಂದಿರುವ 'ಏರ್‌ಸೆಲ್'ನ ವಕ್ತಾರರನ್ನು ಸಂಪರ್ಕಿಸಿದಾಗ, ಹೊಸ ಬೆಳವಣಿಗೆಗಳು ನಡೆಯುತ್ತಿರುವುದನ್ನು ತಳ್ಳಿ ಹಾಕಿದ್ದಾರೆ.
ಇಲ್ಲೇನೂ ಹೊಸತಿಲ್ಲ. ಕಳೆದ ಹಲವು ಸಮಯಗಳಿಂದ ನಾವು ಹಲವು ಸೇವಾದಾರರ ಜತೆ ಟವರ್‌ಗಳನ್ನು ಹಂಚಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಅವರ ಪ್ರಕಾರ ಸಂಸ್ಥೆಯು ಈಗಾಗಲೇ ಮೊಬೈಲ್ ಕ್ಷೇತ್ರದ ಪ್ರಮುಖರಾದ ಭಾರ್ತಿ ಏರ್‌ಟೆಲ್ ಮತ್ತು ರಿಲಯೆನ್ಸ್ ಕಮ್ಯುನಿಕೇಷನ್ಸ್ ಜತೆ ಟವರ್‌ಗಳ ಹಂಚಿಕೆ ಮಾಡಿಕೊಂಡಿದೆ.
ಈ ಬಗ್ಗೆ ತಕ್ಷಣದ ಪ್ರತಿಕ್ರಿಯೆ ನೀಡಲು ರಿಲಯೆನ್ಸ್ ಕಮ್ಯುನಿಕೇಷನ್ ಲಭ್ಯವಾಗಿಲ್ಲ.
ಕಳೆದ ವಾರವಷ್ಟೇ ರಿಲಯೆನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆಯು ಬಹರೈನ್ ಟೆಲಿಕಮ್ಯುನಿಕೇಷನ್ಸ್ ಮಾಲಕತ್ವದ 'ಎಸ್ ಟೆಲ್' ಸಂಸ್ಥೆಯ ಜತೆ ಮೊಬೈಲ್ ಟವರ್ ಸೇರಿದಂತೆ ಮೂಲಭೂತ ವ್ಯವಸ್ಥೆಗಳ ಹಂಚಿಕೆ ಕುರಿತು ಒಪ್ಪಂದ ಮಾಡಿಕೊಂಡಿತ್ತು.