ಬರಗಾಲದ ಕಾರಣದಿಂದಾಗಿ ಕಬ್ಬು ಬೆಳೆ ಕಡಿಮೆಯಾಗಿರುವುದರ ಹಿನ್ನಲೆಯಲ್ಲಿ ಸಕ್ಕರೆ ಕೊರತೆ ನೀಗಿಸಲು 2009-10ರ ಸಾಲಿನ ಅಕ್ಟೋಬರ್‌ನಿಂದ ಆಮದು ಮಾಡಿಕೊಳ್ಳುವ ನಿರ್ಧಾರಕ್ಕೆ ಸರಕಾರ ಬಂದಿದೆ. ಉದ್ಯಮ ವಲಯದವರ ಪ್ರಕಾರ ಮುಂದಿನ ಕೆಲವೇ ತಿಂಗಳುಗಳಲ್ಲಿ ಸಕ್ಕರೆ ಬೆಲೆ ಪ್ರತೀ ಕಿಲೋವೊಂದಕ್ಕೆ 40 ರೂಪಾಯಿಗಳನ್ನು ದಾಟಲಿದೆ.
2009-10ರ ಸಾಲಿನ ಕಬ್ಬು ಲಭ್ಯತೆಯ ಆರಂಭಿಕ ಅಂದಾಜನ್ನು ಗಮನಿಸಿದಾಗ ದೇಶೀಯ ಉತ್ಪಾದನೆಯಲ್ಲಿನ ಕೊರತೆಯನ್ನು ನೀಗಿಸಲು ಆಮದು ಮಾಡಿಕೊಳ್ಳುವುದು ಅನಿವಾರ್ಯ ಎಂದು ಸಮಾವೇಶವೊಂದರಲ್ಲಿ ಪಾಲ್ಗೊಂಡಿದ್ದ ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.
ನಾವು ವಿದೇಶದಿಂದ ಸಕ್ಕರೆಯನ್ನು ಆಮದು ಮಾಡಿಕೊಂಡು, ಅದು ಇಲ್ಲಿಗೆ ತಲುಪುವ ಹೊತ್ತಿಗೆ ಪ್ರತೀ ಕಿಲೋ ಸಕ್ಕರೆಗೆ ಕನಿಷ್ಠ 40 ರೂಪಾಯಿಗಳಾಗಬಹುದು. ಆಗ ಒಂದು ವರ್ಷದ ಅವಧಿಯಲ್ಲಿ ಸಕ್ಕರೆ ಬೆಲೆ ದ್ವಿಗುಣಗೊಂಡಂತಾಗುತ್ತದೆ ಎಂದು ಸಹಕಾರ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಸಂಸ್ಥೆಯ ಅಧ್ಯಕ್ಷ ಜಯಂತಿಲಾಲ್ ಬಿ. ಪಟೇಲ್ ತಿಳಿಸಿದ್ದಾರೆ.
ಭಾರತ ಉತ್ಪಾದಿಸುವಷ್ಟು ಪ್ರಮಾಣದಲ್ಲಿ ವಿದೇಶಗಳು ಸಕ್ಕರೆ ಉತ್ಪಾದಿಸದ ಕಾರಣ ನಾವು ಆಮದು ಮಾಡಿಕೊಳ್ಳುವಾಗ ಸಕ್ಕರೆಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ, ಅಲ್ಲಿ ಪೈಪೋಟಿ ಕಡಿಮೆಯಿರುತ್ತದೆ ಎಂದು ತನ್ನ ಅನುಭವವನ್ನು ಅವರು ವಿವರಿಸಿದ್ದಾರೆ.
ವಿಶ್ವದಲ್ಲೇ ಅತೀ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಭಾರತಕ್ಕೆ ಪ್ರತೀ ವರ್ಷ 22.5ರಿಂದ 23 ಮಿಲಿಯನ್ ಟನ್ ಸಕ್ಕರೆ ಅಗತ್ಯವಿದೆ. 2008-09ರ ಸಾಲಿನಲ್ಲಿ ದೇಶೀಯ ಉತ್ಪಾದನೆ ಕುಸಿತ ಕಂಡಿದ್ದ ಹಿನ್ನಲೆಯಲ್ಲಿ 15 ಮಿಲಿಯನ್ ಟನ್ ಸಕ್ಕರೆಯನ್ನು ಆಮದು ಮಾಡಿಕೊಳ್ಳಲಾಗಿತ್ತು.
ಕಳೆದ ವರ್ಷ ದೇಶವು ಸುಮಾರು 10 ಮಿಲಿಯನ್ ಟನ್ ಸಕ್ಕರೆ ಉತ್ಪಾದಿಸಲು ಸಾಧ್ಯವಾಗಿತ್ತು. ಈ ಬಾರಿಯ ಪರಿಸ್ಥಿತಿ ಗಮನಿಸುವಾಗ ಅದಕ್ಕಿಂತಲೂ ಹಿನ್ನಡೆಯಾಗುವ ಸಾಧ್ಯತೆಗಳು ಗೋಚರಿಸುತ್ತಿವೆ ಎಂದು ಪವಾರ್ ಅಭಿಪ್ರಾಯಪಟ್ಟಿದ್ದಾರೆ.