ಇಂಧನ ದರ ಏರಿಕೆ ಕುರಿತಂತೆ ಯುಪಿಎ ಮೈತ್ರಿಕೂಟದ ಪಕ್ಷಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರನ್ನು ಫೆಬ್ರವರಿ14 ರಂದು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂಧನ ದರಗಳ ಮೇಲಿನ ಸರಕಾರದ ನಿಯಂತ್ರಣ ಮುಕ್ತ ಪ್ರಸ್ತಾಪ ಹಾಗೂ ಇಂಧನ ದರ ಏರಿಕೆ ಕುರಿತಂತೆ ಯುಪಿಎ ಮೈತ್ರಿಕೂಟದ ಪಾಲುದಾರ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ.
ಸಂಪುಟ ಸಭೆಯಲ್ಲಿ ಇಂಧನ ದರ ಏರಿಕೆ ಕುರಿತಂತೆ ಚರ್ಚೆಯಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆದರೆ ಮೂಲಗಳ ಪ್ರಕಾರ, ಪ್ರಣಬ್ ಮುಖರ್ಜಿ ಮತ್ತು ದೇವ್ರಾ, ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಎರಡು ಅಥವಾ ಮೂರು ರೂಪಾಯಿ ಹಾಗೂ ಅಡುಗೆ ಅನಿಲ ದರದಲ್ಲಿ 25 ರೂಪಾಯಿಗಳ ದರವನ್ನು ಹೆಚ್ಚಿಸುವ ಪರವಾಗಿದ್ದಾರೆ. ಆದರೆ, ಮಿತ್ರ ಪಕ್ಷಗಳು ಸೀಮೆಎಣ್ಣೆ ಹಾಗೂ ಅಡುಗೆ ಅನಿಲ ದರವನ್ನು ಹೆಚ್ಚಿಸುವ ನಿರ್ಧಾರವನ್ನು ವಿರೋಧಿಸುತ್ತಿವೆ.